ADVERTISEMENT

ಬ್ರಿಟನ್‌ | ಕೊರೊನಾ ವೈರಸ್‌ ಪತ್ತೆಗಾಗಿ ಶ್ವಾನಗಳಿಗೆ ತರಬೇತಿ, ಹೊಸ ಪ್ರಯೋಗ

ಪಿಟಿಐ
Published 17 ಮೇ 2020, 10:42 IST
Last Updated 17 ಮೇ 2020, 10:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌: ವಾಸನೆಯಿಂದಲೇ ಅಪರಾಧಿಗಳನ್ನು ಕಂಡುಹಿಡಿಯುತ್ತಿದ್ದ ಶ್ವಾನಗಳನ್ನು ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಂಕಿರುವುದನ್ನು ಪತ್ತೆ ಹಚ್ಚಲು ಬಳಸಿಕೊಳ್ಳುವ ಪ್ರಯೋಗಕ್ಕೆ ಬ್ರಿಟನ್‌‌ ಸರ್ಕಾರ ಶನಿವಾರ ಚಾಲನೆ ನೀಡಿದೆ.

ವಿಶೇಷ ತರಬೇತಿ ಪಡೆಯಲಿರುವ ಈ ‘ ಕೋವಿಡ್‌–ಶ್ವಾನಗಳು’ ಮುಂದಿನ ದಿನಗಳಲ್ಲಿ ವಾಸನೆಯ ಮೂಲಕವೇ ಕೊರೊನಾ ವೈರಸ್‌ ಪತ್ತೆ ಹಚ್ಚಲು ಶಕ್ತವಾಗಬಹುದೇ ಎಂಬುದರ ಬಗ್ಗೆ ಪ್ರಯೋಗ ನಡೆಸಲಾಗುತ್ತದೆ.

ವಾಸನೆಯಿಂದಲೇ ಕ್ಯಾನ್ಸರ್‌, ಮಲೇರಿಯಾ ಮತ್ತು ಪಾರ್ಕಿನ್‌ಸನ್‌ನಂಥ ಕಾಯಿಲೆಗಳನ್ನು ಶ್ವಾನಗಳು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿವೆ.

ADVERTISEMENT

‘ಶ್ವಾನಗಳು ಕೆಲವು ನಿರ್ದಿಷ್ಟ ಕ್ಯಾನ್ಸರ್‌ಗಳನ್ನು ಪತ್ತೆ ಹಚ್ಚುತ್ತವೆ ಎಂಬುದು ಈಗಾಗಲೇ ಸಾಬೀತಾಗಿದೆ. ಹಾಗೆಯೇಕೋವಿಡ್‌ ಶ್ವಾನಗಳು ಕೊರೊನಾ ವೈರಸ್‌ ಅನ್ನು ಪತ್ತೆ ಹಚ್ಚಿ, ಅದನ್ನು ಹರಡದಂತೆ ಮಾಡಲು ಶಕ್ತವಿರುವ ಬಗ್ಗೆ ಈ ಪ್ರಯೋಗ ನಿಖರವಾಗಿ ಹೇಳಬಲ್ಲದು’ ಎಂದು ಆವಿಷ್ಕಾರ ಸಚಿವ ಲಾರ್ಡ್‌ ಬೆಥೆಲ್‌ ಹೇಳಿದ್ದಾರೆ.

ರೋಗಲಕ್ಷಣ ಇಲ್ಲದೇ ಇದ್ದರೂ ವೈರಸ್‌ ಪತ್ತೆ ಮಾಡಬಲ್ಲವೇ ಎಂದುಲ್ಯಾಬ್ರಡಾರ್‌ ಮತ್ತು ಕಾಕರ್‌ ಸ್ಪೇನಿಯಲ್‌ಗಳ ಮಿಶ್ರತಳಿಗಳನ್ನು ಈ ಪ್ರಯೋಗಕ್ಕೆ ಒಳಪಡಿಸಲಾಗುತ್ತದೆ. ಕೊರೊನಾ ಸೋಂಕಿತರು ಮತ್ತು ಸೋಂಕಿತರಲ್ಲದವರಿಂದ ವಾಸನೆಯ ಮಾದರಿಗಳನ್ನು ಸಂಗ್ರಹಿಸಿ, ವೈರಸ್‌ ಪತ್ತೆ ಹಚ್ಚಲು ಶ್ವಾನಗಳಿಗೆ ತರಬೇತಿ ನೀಡಲಾಗುತ್ತದೆ’ ಎಂದು ಹೇಳಿದ್ದಾರೆ.

ಈ ಪ್ರಯೋಗವು ಯಶಸ್ವಿಯಾದರೆ, ಕ್ಷಿಪ್ರಗತಿಯಲ್ಲಿ ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ಶ್ವಾನಗಳು ನೆರವಾಗಬಹುದು.

ಲಂಡನ್‌ ಸ್ಕೂಲ್‌ ಆಫ್‌ ಹೈಜಿನ್‌ ಮತ್ತು ಟ್ರೋಪಿಕಲ್‌ ಮೆಡಿಸಿನ್‌ ಸಂಸ್ಥೆ ಸಂಶೋಧಕರು ಮೊದಲ ಹಂತದ ಈ ಪ್ರಯೋಗವನ್ನು ‘ಮೆಡಿಕಲ್‌ ಡಿಟೆಕ್ಷನ್‌ ಡಾಗ್ಸ್‌’ ಮತ್ತು ಡರ್ಹಾಮ್‌ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.