ADVERTISEMENT

ಬ್ರಿಟನ್‌ನಲ್ಲಿ ಆರ್ಥಿಕ ಹಿಂಜರಿತ: ಸಮಸ್ಯೆಯ ಸುಳಿಯಲ್ಲಿ ಪ್ರಧಾನಿ ರಿಷಿ ಸುನಕ್ !

ಪಿಟಿಐ
Published 15 ಫೆಬ್ರುವರಿ 2024, 13:35 IST
Last Updated 15 ಫೆಬ್ರುವರಿ 2024, 13:35 IST
ರಿಷಿ ಸುನಕ್
ರಿಷಿ ಸುನಕ್   

ಲಂಡನ್: ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಕುಸಿದ ಬೆನ್ನಲ್ಲೇ ಅಧಿಕೃತವಾಗಿ ಆರ್ಥಿಕ ಹಿಂಜರಿತಕ್ಕೆ ಬ್ರಿಟನ್ ಪ್ರವೇಶಿಸಿದೆ. ಇದೇ ವರ್ಷ  ಬ್ರಿಟನ್ ಚುನಾವಣೆ ನಡೆಯಲಿದ್ದು, ಆರ್ಥಿಕ ಉತ್ತೇಜನದ ಭರವಸೆ ನೀಡಿದ್ದ ಪ್ರಧಾನಿ ರಿಷಿ ಅವರಿಗೆ ಈಗ ಸಂಕಷ್ಟ ಎದುರಾಗಿದೆ.

ಬ್ರಿಟನ್‌ನ ರಾಷ್ಟ್ರೀಯ ಸಾಂಖಿಕ ಇಲಾಖೆಯ ಇತ್ತೀಚಿನ ಮಾಹಿತಿ ಪ್ರಕಾರ, 2023ರ ಅಕ್ಟೋಬರ್‌ನಿಂದ ಡಿಸೆಂಬರ್‌ ಒಳಗೆ ದೇಶದ ಜಿಡಿಪಿ ಶೇ 0.3ಕ್ಕೆ ಕುಸಿದಿದೆ. ಜುಲೈನಿಂದ ಸೆಪ್ಟೆಂಬರ್‌ವರೆಗಿನ ತ್ರೈಮಾಸಿಕದಲ್ಲಿ ಇದು ಶೇ 0.1ರಷ್ಟಿತ್ತು. ಸತತ ಎರಡು ತ್ರೈಮಾಸಿಕ ಅವಧಿಯ ಒಟ್ಟು ಆರ್ಥಿಕ ಪರಿಸ್ಥಿತಿಯನ್ನು ಜಿಡಿಪಿ ಒಳಗೊಂಡಿರುತ್ತದೆ.

‘ಆರ್ಥಿಕ ಬೆಳವಣಿಗೆಗೆ ಅಧಿಕ ಹಣದುಬ್ಬರವೇ ಕಾರಣ. ಹೀಗಿದ್ದರೂ ಹಣದುಬ್ಬರವನ್ನು ಅರ್ಧದಷ್ಟು ಕಡಿಮೆ ಮಾಡುವುದು ನಮ್ಮ ಆದ್ಯತೆ. ಬಡ್ಡಿ ದರವೂ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಹೀಗಾಗಿ ಬ್ಯಾಂಕ್ ಆಫ್ ಇಂಗ್ಲೆಂಡ್ ಮಾತ್ರ ಈ ಹಣದುಬ್ಬರವನ್ನು ಕಡಿಮೆ ಮಾಡಬಹುದು. ಆದರೆ ಸದ್ಯ ಇರುವ ಕನಿಷ್ಠ ಬೆಳವಣಿಗೆಯು ಯಾವುದೇ ಅಚ್ಚರಿಯಲ್ಲ’ ಎಂದು ಬ್ರಿಟನ್ ಚಾನ್ಸಲರ್‌ ಜೆರ್ಮಿ ಹಂಟ್ ಹೇಳಿದ್ದಾರೆ.

ADVERTISEMENT

‘ಆದರೆ ಬ್ರಿಟನ್‌ನ ಅರ್ಥಿಕ ಪರಿಸ್ಥಿತಿಯು ಮತ್ತೆ ಸುಧಾರಣೆಯ ಹಾದಿ ತುಳಿಯುವ ಸುಳಿವೂ ಇದೆ. ಮುನ್ಸೂಚನೆ ಪ್ರಕಾರ ಮುಂದಿನ ಕೆಲ ವರ್ಷಗಳಲ್ಲಿ ಆರ್ಥಿಕ ಬೆಳವಣಿಗೆ ವೃದ್ಧಿಸಲಿದೆ. ವೇತನವು ಬೆಲೆಗಿಂತಲೂ ಹೆಚ್ಚಾಗಲಿದೆ. ಆಸ್ತಿಗಳ ಮುಟ್ಟುಗೋಲು ಪ್ರಕರಣಗಳು ತಗ್ಗಲಿವೆ. ಜತೆಗೆ ನಿರುದ್ಯೋಗ ಪ್ರಮಾಣವೂ ಇಳಿಮುಖವಾಗಲಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಹಳಷ್ಟು ಕುಟುಂಬಗಳು ಕಷ್ಟದ ದಿನಗಳನ್ನು ಎದುರಿಸುತ್ತಿವೆ. ಆರ್ಥಿಕತೆಯನ್ನು ಸದೃಢಗೊಳಿಸಲು ವೃತ್ತಿ ಹಾಗೂ ವ್ಯವಹಾರ ಕ್ಷೇತ್ರಗಳಲ್ಲಿ ತೆರಿಗೆ ಕಡಿತ ಮಾಡಬೇಕು’ ಎಂದು ಅವರ ಅಭಿಪ್ರಾಯಪಟ್ಟರು.

ಹಣ ದುಬ್ಬರ, ಸಾಲದ ಮರುಪಾವತಿ ಕುಸಿತ, ಅಕ್ರಮ ವಲಸೆ ನಿಯಂತ್ರಣ ಹಾಗೂ ಆರೋಗ್ಯ ಸೇವೆಯಲ್ಲಿ ಕಡಿತದಂತ ಸಮಸ್ಯೆಗಳನ್ನು ದೇಶ ಎದುರಿಸುತ್ತಿದ್ದ ಸಂದರ್ಭದಲ್ಲೂ ಕಳೆದ ಜನವರಿಯಲ್ಲಿ ಸುನಕ್ ಅವರು ದೇಶವನ್ನು ಉದ್ದೇಶಿ ಮಾತನಾಡಿ, ಆರ್ಥಿಕತೆಯ ಚೇತರಿಕೆ ಕುರಿತು ಭರವಸೆ ನೀಡಿದ್ದರು.

‘ದೇಶದ ಕಳಪೆ ಆರ್ಥಿಕ ಮಟ್ಟ ತಲುಪುವುದನ್ನು ತಡೆಯುವಲ್ಲಿ ರಿಷಿ ಸುನಕ್ ವಿಫಲರಾಗಿದ್ದಾರೆ. ಆ ಮೂಲಕ 14 ವರ್ಷಗಳಲ್ಲೇ ಆರ್ಥಿಕತೆ ತೀರಾ ಕಳಪೆ ಮಟ್ಟಕ್ಕೆ ಕುಸಿದಿದೆ. ಬ್ರಿಟನ್‌ ಆರ್ಥಿಕ ಹಿಂಜರಿತಕ್ಕೆ ಒಳಗಾಗಿದೆ. ದುಡಿಯುವ ಜನರು ಈ ಬೆಲೆಯನ್ನು ಹೇಗೆ ತೆತ್ತಾರು? ಬದಲಾವಣೆಗೆ ಸರಿಯಾದ ಸಮಯ ಇದಾಗಿದೆ. ಇದನ್ನು ಕಾರ್ಮಿಕರು ಮಾತ್ರ ಮಾಡಬಲ್ಲರು’ ಎಂದು ಲೇಬರ್ ಪಕ್ಷದ ಮುಖಂಡ ಕೀರ್ ಸ್ಟಾರ್ಮರ್‌ ಹೇಳಿದ್ದಾರೆ. 

‘ಈ ಆರ್ಥಿಕ ಹಿಂಜರಿತವು ರಿಷಿ ಸುನಕ್ ಅವರದ್ದು. ದೇಶದ ಆರ್ಥಿಕ ಪರಿಸ್ಥಿತಿಯ ಈ ಸುದ್ದಿ ಬ್ರಿಟನ್‌ ಎಲ್ಲಾ ಕುಟುಂಬಗಳನ್ನೂ ಚಿಂತೆಗೀಡು ಮಾಡಿವೆ’ ಎಂದು ರಷೆಲ್ ರೀವ್ಸ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.