ADVERTISEMENT

ಮೋದಿ ಕುರಿತ ಬಿಬಿಸಿಯ ವಿವಾದಿತ ಸಾಕ್ಷ್ಯಚಿತ್ರ: ಸ್ವತಂತ್ರ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 12:32 IST
Last Updated 23 ಜನವರಿ 2023, 12:32 IST
ಮೋದಿ
ಮೋದಿ    

ಲಂಡನ್‌(ಪಿಟಿಐ): ಭಾರತದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವಿವಾದಾತ್ಮಕ ಸಾಕ್ಷ್ಯ ಚಿತ್ರ ನಿರ್ಮಿಸಿರುವ ಬ್ರಿಟನ್‌ನ ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಶನ್ (ಬಿಬಿಸಿ) ವಿರುದ್ಧ ಸ್ವತಂತ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿ ಆನ್‌ಲೈನ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ.

ಮೋದಿ ಅವರ ಬಗ್ಗೆ ನಿರ್ಮಿಸಿರುವ ಸಾಕ್ಷ್ಯಚಿತ್ರದಲ್ಲಿ ‘ನಿಷ್ಪಕ್ಷಪಾತ ಸಂಪಾದಕೀಯ’ದ ಮಾನದಂಡಗಳನ್ನು ಪಾಲಿಸುವಲ್ಲಿ ಬಿಬಿಸಿ ವಿಫಲವಾಗಿದೆ. ಇದು ಖಂಡನೀಯ. ಬಿಬಿಸಿ ವಿರುದ್ಧ ಸ್ವತಂತ್ರ ತನಿಖೆಯಾಗಬೇಕು’ ಎಂದು ‘ಚೇಂಜ್.ಆರ್ಗ್’ ಹೆಸರಿನಲ್ಲಿ ಭಾನುವಾರ ರಾತ್ರಿ ಆನ್‌ಲೈನ್‌ನಲ್ಲಿ ಸಲ್ಲಿಕೆಯಾಗಿರುವ 2,500ಕ್ಕೂ ಹೆಚ್ಚು ಜನರ ಸಹಿ ಇರುವ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಹೆಸರಿನ ಸಾಕ್ಷ್ಯಚಿತ್ರದ ಮೊದಲ ಭಾಗ ಕಳೆದ ವಾರ ಪ್ರಸಾರವಾಗಿದ್ದು, ಎರಡನೇ ಭಾಗ ಮಂಗಳವಾರ ಪ್ರಸಾರವಾಗಲಿದೆ. ಇದರಲ್ಲೂ ನಿಷ್ಪಕ್ಷಪಾತ ಸಂಪಾದಕೀಯದ ಅತ್ಯುನ್ನತ ಮಾನದಂಡಗಳನ್ನು ಪಾಲಿಸಿಲ್ಲ. ‘ಇದು ಬಿಬಿಸಿಯು ತನ್ನ ವೀಕ್ಷಕರಿಗೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡುವ ಕುಟಿಲ ಪ್ರಚಾರದ ಪತ್ರಿಕೋದ್ಯಮ’ ಎಂದು ಅರ್ಜಿಯಲ್ಲಿ ಟೀಕಿಸಲಾಗಿದೆ.

ADVERTISEMENT

ಅರ್ಜಿಯಲ್ಲಿ ಸಹಿ ಮಾಡಿರುವ ಹಲವರು ಇದೇ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿದ್ದು, ಈ ಸಾಕ್ಷ್ಯಚಿತ್ರ ಸಂಪೂರ್ಣ ಅಪಪ್ರಚಾರ ಮತ್ತು ದುರುದ್ದೇಶಪೂರಿತ ಕಾರ್ಯಸೂಚಿಯಿಂದ ಕೂಡಿದೆ. ಬಿಬಿಸಿಯ ಈ ನಡೆ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.