ಲಂಡನ್: ಜನಾಂಗೀಯ ದ್ವೇಷಕ್ಕಾಗಿ ಬ್ರಿಟಿಷ್ ಸಿಖ್ ಯುವತಿಯ ಮೇಲೆ ನಡೆದಿದೆ ಎನ್ನಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್ ಪೊಲೀಸರು ಶಂಕಿತ ವ್ಯಕ್ತಿ (30) ಒಬ್ಬನನ್ನು ಬಂಧಿಸಿದ್ದಾರೆ.
ಶಂಕಿತನನ್ನು ಭಾನುವಾರವೇ ಬಂಧಿಸಲಾಗಿದ್ದು, ತನಿಖೆಯ ಭಾಗವಾಗಿ ಆತನನ್ನು ಪೊಲೀಸರ ವಶದಲ್ಲೇ ಇರಿಸಿಕೊಳ್ಳಲಾಗಿದೆ. ಸಂತ್ರಸ್ತ ಯುವತಿಯ ಸಮುದಾಯವು ತನಿಖೆಗೆ ಸಹಕರಿಸುತ್ತಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲ್ಯಾಂಡ್ ಪ್ರಾಂತ್ಯದ ಓಲ್ಡ್‌ಬರಿ ಎಂಬಲ್ಲಿ ಕಳೆದ ಮಂಗಳವಾರ ಸಿಖ್ ಯುವತಿಯೊಬ್ಬರ ಮೇಲೆ ಅತ್ಯಾಚಾರ ನಡೆದಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಅತ್ಯಾಚಾರ ಎಸಗಿರುವ ಆರೋಪಿಗಳು ಸಂತ್ರಸ್ತೆಗೆ ‘ನೀನು ಈ ನೆಲದವಳಲ್ಲ’ ಎಂದು ಜನಾಂಗೀಯ ನಿಂದನೆಯನ್ನೂ ಮಾಡಿದ್ದರು ಎನ್ನಲಾಗಿತ್ತು. ಜನಾಂಗೀಯ ದ್ವೇಷದಿಂದಲೇ ಈ ಅತ್ಯಾಚಾರ ಎಸಗಿದ್ದಾರೆಂಬ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿಯೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.