ADVERTISEMENT

ಸೀರಂ ಸಂಸ್ಥೆಯಿಂದ 1 ಕೋಟಿ ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಪಡೆಯಲಿರುವ ಬ್ರಿಟನ್

ರಾಯಿಟರ್ಸ್
Published 3 ಮಾರ್ಚ್ 2021, 2:34 IST
Last Updated 3 ಮಾರ್ಚ್ 2021, 2:34 IST
ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆ (ಚಿತ್ರ ಕೃಪೆ: ರಾಯಿಟರ್ಸ್)
ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆ (ಚಿತ್ರ ಕೃಪೆ: ರಾಯಿಟರ್ಸ್)   

ನವದೆಹಲಿ: ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ(ಎಸ್‌ಐಐ) ತಯಾರಿಸಿದ 1 ಕೋಟಿ ಆಸ್ಟ್ರಾಜೆನೆಕಾ ಕೋವಿಡ್-19 ಲಸಿಕೆ ಡೋಸ್‌ಗಳನ್ನು ಪಡೆಯಲಿದ್ದೇವೆ ಎಂದು ಬ್ರಿಟನ್ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸಂಸ್ಥೆಯಾದ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಬಡ ಹಾಗೂ ಮಧ್ಯಮ ವರ್ಗದ ದೇಶಗಳಿಗಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಸ್ಟ್ರಾಜೆನೆಕಾ ಕೋವಿಡ್-19 ಲಸಿಕೆಗಳನ್ನು ಉತ್ಪಾದಿಸುತ್ತಿದೆ.

10 ಕೋಟಿ ಆಸ್ಟ್ರಾಜೆನೆಕಾ ಕೋವಿಡ್-19 ಲಸಿಕೆ ಡೋಸ್‌ಗಳಿಗಾಗಿ ಬ್ರಿಟನ್ ಆರ್ಡರ್ ಮಾಡಿದೆ. ಈ ಪೈಕಿ 1 ಕೋಟಿ ಎಸ್‌ಐಐನಿಂದ ಪೂರೈಕೆಯಾಗಲಿದೆ ಎಂದು ಬ್ರಿಟನ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಫೆಬ್ರುವರಿಯಲ್ಲಿ ಬ್ರಿಟನ್‌ನ ಮೆಡಿಸಿನ್ಸ್ ಹಾಗೂ ಹೆಲ್ತ್‌ಕೇರ್ ಉತ್ಪನ್ನಗಳ ನಿಯಂತ್ರಣ ಏಜೆನ್ಸಿ (ಎಂಎಚ್‌ಆರ್‌ಎ) ಎಸ್‌ಐಐನಲ್ಲಿ ಉತ್ಪಾದನಾ ಪಕ್ರಿಯೆಗಳನ್ನು ಪರಿಶೋಧಿಸಿತ್ತು ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಈ ನಡುವೆ ಪಾಶ್ಚಿಮಾತ್ಯ ಶ್ರೀಮಂತ ದೇಶಗಳು ಬಡ ದೇಶಗಳ ವೆಚ್ಚದಲ್ಲಿ ಕೋವಿಡ್-19 ಲಸಿಕೆಗಳನ್ನು ಸಂಗ್ರಹಿಸುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಬಾಂಗ್ಲಾದೇಶದಿಂದ ಬ್ರೆಜಿಲ್ ವರೆಗಿನ ಕಡಿಮೆ ಹಾಗೂ ಮಧ್ಯಮ ಆದಾಯದ ದೇಶಗಳು ಎಸ್‌ಐಐನ ಆಸ್ಟ್ರಾಜೆನೆಕಾ 'ಕೋವಿಶೀಲ್ಡ್' ಲಸಿಕೆಯನ್ನು ಅವಲಂಬಿಸಿವೆ. ಆದರೆ ಈಗ ಪಾಶ್ಚಿಮಾತ್ಯ ದೇಶಗಳಿಂದ ಬೇಡಿಕೆ ಹೆಚ್ಚುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ನೇತೃತ್ವದಲ್ಲಿ ಕೋವಾಕ್ಸ್ ಅಭಿಯಾನಕ್ಕೂ ಎಸ್‌ಐಐ ಕೋವಿಡ್ ಲಸಿಕೆಯನ್ನು ಪೂರೈಸುತ್ತಿದೆ.

ಹಾಗಿದ್ದರೂ ಬಡ ದೇಶಗಳಿಗೆ ಲಸಿಕೆಗಳನ್ನು ನೀಡುವ ಬದ್ಧತೆಯ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂಬ ಎಸ್‌ಐಐ ವಾಗ್ದಾನದ ಮೇರೆಗೆ ಕೋವಿಡ್-19 ಲಸಿಕೆ ಡೋಸ್‌ಗಳನ್ನು ಸ್ವೀಕರಿಸಲು ಮುಂದಾಗಿದ್ದೇವೆ ಎಂದು ಬ್ರಿಟನ್ ಸರ್ಕಾರ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.