ADVERTISEMENT

ಬ್ರಿಟನ್ ರೈಲಿನಲ್ಲಿ ಹಲವರಿಗೆ ಚಾಕುವಿನಿಂದ ಇರಿತ: ಇಬ್ಬರ ಬಂಧನ

ಪಿಟಿಐ
Published 2 ನವೆಂಬರ್ 2025, 4:48 IST
Last Updated 2 ನವೆಂಬರ್ 2025, 4:48 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಲಂಡನ್‌: ಬ್ರಿಟನ್‌ನ ಕೇಂಬ್ರಿಡ್ಜ್‌ಶೈರ್‌ನ ಹಂಟಿಂಗ್ಡನ್‌ನಲ್ಲಿ ಶನಿವಾರ ರಾತ್ರಿ ರೈಲಿನಲ್ಲಿ ಇಬ್ಬರು ದುಷ್ಕರ್ಮಿಗಳು ಪ್ರಯಾಣಿಕರಿಗೆ ಚಾಕುವಿನಿಂದ ಇರಿದಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 9 ಜನರ ಸ್ಥಿತಿ ಗಂಭೀರವಾಗಿದೆ.

ADVERTISEMENT

ಮಾಹಿತಿ ಲಭಿಸಿದ ಬೆನ್ನಲ್ಲೇ, ತುರ್ತು ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ಬೆನ್ನಲ್ಲೇ ಪೂರ್ವ ಇಂಗ್ಲೆಂಡ್‌ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. 

‘ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಾಗಿದೆ. 9 ಮಂದಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಭಯೋತ್ಪಾದನಾ ನಿಗ್ರಹ ಪೊಲೀಸ್‌ ತಂಡವೂ ನಮ್ಮೊಂದಿಗೆ ತನಿಖೆಯಲ್ಲಿ ಭಾಗಿಯಾಗಿದೆ’ ಎಂದು ಬ್ರಿಟಿಷ್‌ ವಿಶೇಷ ಪೊಲೀಸ್‌ ತಂಡ ತಿಳಿಸಿದೆ.   

‘ಡಾನ್ಕಾಸ್ಟರ್‌ನಿಂದ ಕಿಂಗ್ಸ್ ಕ್ರಾಸ್‌ ಸ್ಟೇಷನ್‌ಗೆ ಹೊರಟಿದ್ದ ಹೈಸ್ಪೀಡ್‌ ರೈಲಿನಲ್ಲಿ ಈ ಘಟನೆ ನಡೆದಿದೆ. ಶನಿವಾರ ಸಂಜೆ 7.39ರ ಸುಮಾರಿಗೆ ರೈಲಿನಲ್ಲಿ ಇರಿತ ನಡೆದಿದೆ ಎಂಬ ಮಾಹಿತಿ ಲಭಿಸಿತು. ತಕ್ಷಣ ಕಾರ್ಯಪ್ರವೃತರಾಗಿ ಹಂಟಿಂಗ್ಡನ್‌ ನಿಲ್ದಾಣದಲ್ಲಿ ರೈಲು ನಿಲ್ಲಿಸಿ, ಇಬ್ಬರನ್ನು ಬಂಧಿಸಿದೆವು’ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ.

ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಘಟನೆಯನ್ನು ಖಂಡಿಸಿದ್ದು, ‘ಇದೊಂದು ಭಯಾನಕ ಘಟನೆ. ಜನರು ಪೊಲೀಸರ ನಿರ್ದೇಶನಗಳನ್ನು ಪಾಲಿಸಬೇಕು’ ಎಂದು ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ. 

‘ತನಿಖೆ ನಡೆಯುತ್ತಿದೆ. ಪ್ರಾಥಮಿಕ ಹಂತದಲ್ಲೇ ಜನರು ಊಹಾಪೋಹದ ಸುದ್ದಿಗಳನ್ನು ಹರಡಬಾರದು’ ಎಂದು ಬ್ರಿಟನ್‌ನ ಗೃಹ ಕಾರ್ಯದರ್ಶಿ ಶಬಾನಾ ಮಹಮ್ಮದ್‌ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.