ADVERTISEMENT

ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ಜೊತೆ ಸಂಘರ್ಷ: ಉಕ್ರೇನ್‌ನ ಇಬ್ಬರು ಯೋಧರ ಸಾವು

ಏಜೆನ್ಸೀಸ್
Published 19 ಫೆಬ್ರುವರಿ 2022, 16:06 IST
Last Updated 19 ಫೆಬ್ರುವರಿ 2022, 16:06 IST
ಉಕ್ರೇನ್ ಸೇನೆ: ಪಿಟಿಐ ಚಿತ್ರ
ಉಕ್ರೇನ್ ಸೇನೆ: ಪಿಟಿಐ ಚಿತ್ರ   

ಕೈವ್: ಅಮೆರಿಕದ ಎಚ್ಚರಿಕೆಯ ಹೊರತಾಗಿಯೂ ರಷ್ಯಾ, ಉಕ್ರೇನ್ ಮೇಲಿನ ಆಕ್ರಮಣಕಾರಿ ವರ್ತನೆ ಮುಂದುವರೆಸಿದೆ.

ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳೊಂದಿಗೆ ನಡೆದ ಸಂಘರ್ಷದಲ್ಲಿ ತನ್ನ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಸೇನೆ ಶನಿವಾರ ಹೇಳಿದೆ. ಒಂದು ತಿಂಗಳಿಗಿಂತ ಹೆಚ್ಚು ಅವಧಿಯಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ಸಂಘರ್ಷ, ಉಕ್ರೇನ್‌ನ ಇಬ್ಬರು ಯೋಧರ ಸಾವಿನೊಂದಿಗೆ ಮತ್ತಷ್ಟು ತೀವ್ರಗೊಂಡಿದೆ.

'ಶೆಲ್ ದಾಳಿಯ ಪರಿಣಾಮವಾಗಿ, ಇಬ್ಬರು ಉಕ್ರೇನ್ ಸೈನಿಕರಿಗೆ ಮಾರಣಾಂತಿಕ ಗಾಯಗಳಾದವು’ ಎಂದು ಪ್ರತ್ಯೇಕತಾವಾದಿ ಸಂಘರ್ಷದ ಮಿಲಿಟರಿ ಕಮಾಂಡ್ ಹೇಳಿದ್ದಾರೆ.

ADVERTISEMENT

ಈ ಮಧ್ಯೆ, ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ನೇತೃತ್ವದಲ್ಲಿ ಶನಿವಾರ ರಷ್ಯಾ ಪರಮಾಣು-ಸಾಮರ್ಥ್ಯದ ಕ್ಷಿಪಣಿಗಳನ್ನು ಒಳಗೊಂಡ ಮತ್ತೊಂದು ಮಿಲಿಟರಿ ತಾಲೀಮನ್ನು ನಡೆಸಿದ್ದು, ಕ್ಷಿಪಣಿಗಳು ನಿಗದಿತ ಗುರಿ ಮುಟ್ಟಿವೆ ಎಂದು ವರದಿಯಾಗಿದೆ.

ಕೆಲವೇ ದಿನಗಳಲ್ಲಿ ಉಕ್ರೇನ್ ಅನ್ನು ಆಕ್ರಮಿಸಲು ರಷ್ಯಾ ಯೋಜಿಸುತ್ತಿದೆ ಎಂದು ಅಮೆರಿಕ ಎಚ್ಚರಿಸಿದ ಗಂಟೆಗಳ ನಂತರ ಈ ಸಾಹಸಕ್ಕೆ ರಷ್ಯಾ ಕೈಹಾಕಿದೆ.

ಉಕ್ರೇನ್ ಮೇಲೆ ಯುದ್ಧ ಮಾಡುವುದಿಲ್ಲ ಎಂದು ರಷ್ಯಾ ಹೇಳುತ್ತಿದ್ದರೂ ಸಹ ಅದು ಯುದ್ಧ ಸನ್ನದ್ಧತೆಯಲ್ಲಿ ತೊಡಗಿರುವುದನ್ನು ಅಮೆರಿಕ ಬಯಲು ಮಾಡಿತ್ತು. ಉಕ್ರೇನ್ ಗಡಿಯಲ್ಲಿ ರಷ್ಯಾವು ಸರಿ ಸುಮಾರು 1.5 ಲಕ್ಷ ಯೋಧರನ್ನು ನಿಯೋಜಿಸಿದೆ. ಉಕ್ರೆನಿನಲ್ಲಿರುವ ರಷ್ಯಾ ಬೆಂಬಲಿತ ಬಂಡಾಯಗಾರರನ್ನು ಸೇರಿಸಿ ಈ ಸಂಖ್ಯೆ 1.9 ಲಕ್ಷ ದಾಟುತ್ತದೆ ಎಂದು ಅಮೆರಿಕ ಹೇಳಿತ್ತು.

ಪಾಶ್ಚಿಮಾತ್ಯ ದೇಶಗಳ ಬೃಹತ್ ನಿರ್ಬಂಧಗಳ ಎಚ್ಚರಿಕೆಗಳನ್ನು ಲೆಕ್ಕಿಸದೆಯೇ ಪುಟಿನ್ ಆಕ್ರಮಣಕ್ಕೆ ಕರೆ ನೀಡಿದ್ದಾರೆ ಎಂದು ನನಗೆ ಖಚಿತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.