ADVERTISEMENT

Ukraine-Russia War:ಆಗಸ್ಟ್‌ 15ಕ್ಕೆ ಅಲಾಸ್ಕಾದಲ್ಲಿ ಟ್ರಂಪ್‌–ಪುಟಿನ್‌ ಮಾತುಕತೆ

ರಾಯಿಟರ್ಸ್
Published 9 ಆಗಸ್ಟ್ 2025, 4:34 IST
Last Updated 9 ಆಗಸ್ಟ್ 2025, 4:34 IST
<div class="paragraphs"><p>ಪುಟಿನ್‌-ಟ್ರಂಪ್‌</p></div>

ಪುಟಿನ್‌-ಟ್ರಂಪ್‌

   

ರಾಯಿಟರ್ಸ್‌ ಚಿತ್ರ

ವಾಷಿಂಗ್ಟನ್‌ : ‘ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಅವರೊಂದಿಗೆ ಶೀಘ್ರದಲ್ಲೇ ಮಾತುಕತೆ ನಡೆಸಲಿದ್ದು, ರಷ್ಯಾ–ಉಕ್ರೇನ್‌ ನಡುವಿನ ಯುದ್ಧ ಕೊನೆಗಾಣಿಸಿ, ಕದನ ವಿರಾಮ ಘೋಷಿಸಲು ಅಂತಿಮ ಒಪ್ಪಂದಕ್ಕೆ ಬರಲಾಗುವುದು’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. 

ADVERTISEMENT

‘ರಷ್ಯಾ ಮತ್ತು ಅಮೆರಿಕದ ಅಧ್ಯಕ್ಷರ ಬಹುನಿರೀಕ್ಷಿತ ಸಭೆ ಇದೇ ಆ.15ರಂದು ಅಲಾಸ್ಕಾದಲ್ಲಿ ನಿಗದಿಯಾಗಿದೆ’ ಎಂದು ಟ್ರಂಪ್‌ ತಮ್ಮ ಸಾಮಾಜಿಕ ಜಾಲತಾಣ ‘ಟ್ರುಥ್‌’ನಲ್ಲಿ ಹೇಳಿದ್ದಾರೆ. 

ರಷ್ಯಾದ ಆಡಳಿತ ಕಚೇರಿ ಕ್ರೆಮ್ಲಿನ್‌, ಪುಟಿನ್‌–ಟ್ರಂಪ್‌ ಭೇಟಿಯನ್ನು ಖಚಿತಪಡಿಸಿದೆ. ರಷ್ಯಾ–ಉಕ್ರೇನ್‌ ಕದನ ವಿರಾಮ ಘೋಷಣೆಗೆ ಸಂಬಂಧಿಸಿದಂತೆ ಅಮೆರಿಕ ಈಗಾಗಲೇ ಮೂರು ಬಾರಿ ನಡೆಸಿದ ಸಂಧಾನ ಮಾತುಕತೆ ವಿಫಲಗೊಂಡಿದೆ. ಉಕ್ರೇನ್‌ ಜತೆಗೆ ಕದನ ವಿರಾಮ ಘೋಷಿಸುವಂತೆ ರಷ್ಯಾಗೆ ಟ್ರಂಪ್‌ ನೀಡಿದ 50 ದಿನಗಳ ಗಡುವು ಶುಕ್ರವಾರ ಕೊನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಆ.15ರ ಟ್ರಂಪ್‌ –ಪುಟಿನ್‌ ನೇರ ಭೇಟಿ ಮಹತ್ವ ಪಡೆದುಕೊಂಡಿದೆ.  

‘ಉಭಯ ದೇಶಗಳ ಅಧ್ಯಕ್ಷರು ಯುದ್ಧ ಕೊನೆಗಾಣಿಸಿ ಶಾಂತಿ ಮರುಸ್ಥಾಪಿಸುವ ನಿಟ್ಟಿನಲ್ಲಿ  ಗಮನ ಕೇಂದ್ರೀಕರಿಸಿದ್ದಾರೆ’ ಎಂದು ಕ್ರೆಮ್ಲಿನ್ ಸಹಾಯಕ ಯೂರಿ ಉಷಕೋವ್‌ ಟೆಲಿಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಅಮೆರಿಕ ನೀಡಿದ್ದ ಗಡುವು ಮುಗಿದ ಬೆನ್ನಲ್ಲೇ, ಪುಟಿನ್‌ ಅವರು ಭಾರತ ಮತ್ತು ಚೀನಾದ ಮುಖಂಡರೊಂದಿಗೆ ಶುಕ್ರವಾರ ಮಾತುಕತೆ ನಡೆಸಿದ್ದರು. 

2021ರ ನಂತರ ಅಮೆರಿಕ ಮತ್ತು ರಷ್ಯಾದ ಅಧ್ಯಕ್ಷರು ಇದೇ ಮೊದಲ ಬಾರಿಗೆ ನೇರ ಮಾತುಕತೆಗೆ ಮುಂದಾಗಿದ್ದಾರೆ. 2021ರಲ್ಲಿ ಜಿನಿವಾದಲ್ಲಿ ನಡೆದ ಸಭೆಯಲ್ಲಿ ಆಗಿನ ಅಧ್ಯಕ್ಷ ಜೊ ಬೈಡನ್‌ ಅವರೊಂದಿಗೆ ಪುಟಿನ್‌ ಮಾತುಕತೆ ನಡೆಸಿದ್ದರು. 2019ರಲ್ಲಿ ಜಪಾನ್‌ನಲ್ಲಿ ನಡೆದ ಜಿ–20 ಶೃಂಗಸಭೆಯಲ್ಲಿ ಟ್ರಂಪ್‌–ಪುಟಿನ್‌ ಮಾತುಕತೆ ನಡೆಸಿದ್ದರು.  

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರೊಂದಿಗೆ ಈ ಹಂತದಲ್ಲಿ ಮಾತುಕತೆ ನಡೆಸುವ ಸಾಧ್ಯತೆಯನ್ನು ಟ್ರಂಪ್‌ ತಳ್ಳಿಹಾಕಿದ್ದಾರೆ. 

ಯುದ್ಧ ನಿಲ್ಲಿಸಿದ್ದು ನಾನೇ: ಪುನರುಚ್ಚರಿಸಿದ ಟ್ರಂಪ್‌ 

‘ಭಾರತ –ಪಾಕ್‌ ನಡುವಿನ ಯುದ್ಧ ನಿಲ್ಲಿಸಿ ಕದನ ವಿರಾಮ ಘೋಷಿಸಲು ನಾನೇ ಕಾರಣ’ ಎಂದು ಡೊನಾಲ್ಡ್‌ ಟ್ರಂಪ್‌ ಪುನರುಚ್ಚರಿಸಿದ್ದಾರೆ.  ಶುಕ್ರವಾರ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಭಾರತ– ಪಾಕ್‌ ನಡುವೆ ನಾಲ್ಕು ದಿನ ಮುಂದುವರಿದ ಸೇನಾ ಸಂಘರ್ಷದಲ್ಲಿ ಐದರಿಂದ ಆರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ನೆರೆಹೊರೆ ದೇಶಗಳು ‘ಅಣ್ವಸ್ತ್ರ ಪ್ರಯೋಗಿಸುವ ಹಂತ’ ತಲುಪಿದ್ದ ಈ ಸಂಘರ್ಷನ್ನು ನಾನು ಶಮನಗೊಳಿಸಿದೆ’ ಎಂದು ಹೇಳಿದ್ದಾರೆ. ‘ಅಮೆರಿಕದ ಅಧ್ಯಕ್ಷನಾಗಿ ನನ್ನ ಮೊದಲ ಆದ್ಯತೆ ಜಗತ್ತಿನೆಲ್ಲೆಡೆ ಶಾಂತಿ ಮತ್ತು ಸುಸ್ಥಿರತೆ ತರುವುದಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ. 

‘ನಾವಿಲ್ಲದೆ ಯುದ್ಧ ನಿಲ್ಲುವುದಿಲ್ಲ’ 

‘ಉಕ್ರೇನ್‌ ರಷ್ಯಾಕ್ಕೆ ತನ್ನ ಭೂಮಿಯನ್ನು ಬಿಟ್ಟುಕೊಡುವುದಿಲ್ಲ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಖಡಾಖಂಡಿತವಾಗಿ ಹೇಳಿದ್ದಾರೆ.  ರಷ್ಯಾ–ಉಕ್ರೇನ್‌ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಟ್ರಂಪ್‌ ಮತ್ತು ಪುಟಿನ್‌ ಶೀಘ್ರದಲ್ಲೇ ಮಾತುಕತೆ ನಡೆಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ ಝೆಲೆನ್‌ಸ್ಕಿ ಈ ಪ್ರತಿಕ್ರಿಯೆ ನೀಡಿದ್ದಾರೆ.  ರಷ್ಯಾ–ಉಕ್ರೇನ್‌ ಎರಡೂ ದೇಶಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ದೇಶಗಳ ಗಡಿ ಮರುನಿಗದಿ ಮಾಡುವಾಗ ಸ್ವಲ್ಪ ವ್ಯತ್ಯಾಸ ಆಗಬಹುದು ಟ್ರಂಪ್‌ ಹೇಳಿದ್ದರು. ಇದಕ್ಕೆ ಝೆಲೆನ್‌ಸ್ಕಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.  ‘ನಮ್ಮ ವಿರುದ್ಧದ ಅಥವಾ ಉಕ್ರೇನ್‌ನನ್ನು ಹೊರಗಿರಿಸಿ ತೆಗೆದುಕೊಳ್ಳುವ ಯಾವುದೇ ನಿರ್ಧಾರವು ಶಾಂತಿಗೆ ವಿರುದ್ಧವಾಗಿದೆ. ಈ ಮಾತುಕತೆಯಿಂದ ಅವರು ಏನೂ ಸಾಧಿಸುವುದಿಲ್ಲ. ಯುದ್ಧ ಕೊನೆಗೊಳ್ಳಬೇಕಾದರೆ ನಾವಿರಬೇಕು ಉಕ್ರೇನ್‌ ಇಲ್ಲದೆ ಯುದ್ಧ ಮುಗಿಯುವುದಿಲ್ಲ’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.