ವಾಷಿಂಗ್ಟನ್/ಕೀವ್: ಉಕ್ರೇನ್–ರಷ್ಯಾ ನಡುವೆ ಕದನ ವಿರಾಮಕ್ಕೆ ಬರುವ ಬಗ್ಗೆ ಒಪ್ಪಂದ ಮಾಡಿಕೊಳ್ಳುವ ಬದಲು ಯುದ್ಧವನ್ನೇ ಅಂತ್ಯಗೊಳಿಸುವ ಒಪ್ಪಂದವೊಂದನ್ನು ರೂಪಿಸಲು ಅಮೆರಿಕ ಮುಂದಾಗಿದೆ. ಇದಕ್ಕೆ ಐರೋಪ್ಯ ದೇಶಗಳು ಬೆಂಬಲ ಸೂಚಿಸಿವೆ.
ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಬಳಿಕ ಪ್ರತಿಕ್ರಿಯಿಸಿದ ಐರೋಪ್ಯ ಒಕ್ಕೂಟದ ದೇಶಗಳು, ‘ಮುಂದಿನ ಮಾತುಕತೆಯಲ್ಲಿ ಟ್ರಂಪ್ ಮತ್ತು ಪುಟಿನ್ ಮಾತ್ರ ಇರಬಾರದು. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೂ ಇರಬೇಕು’ ಎಂದು ಆಗ್ರಹಿಸಿವೆ.
‘ಟ್ರಂಪ್ ಮತ್ತು ಝೆಲೆನ್‌ಸ್ಕಿ ಅವರೊಂದಿಗೆ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ. ಟ್ರಂಪ್–ಪುಟಿನ್–ಝೆಲೆನ್‌ಸ್ಕಿ ಮೂವರೂ ಸೇರಿ ಮಾತುಕತೆ ನಡೆಸಬೇಕು. ನ್ಯಾಟೊಗೆ ಸೇರುವ ಉಕ್ರೇನ್‌ನ ಯತ್ನಕ್ಕೆ ರಷ್ಯಾವು ತಡೆವೊಡ್ಡಬಾರದು’ ಎಂದು ಐರೋಪ್ಯ ಒಕ್ಕೂಟವು ಹೇಳಿಕೆ ಬಿಡುಗಡೆ ಮಾಡಿದೆ.
‘ಉಕ್ರೇನ್‌ನಲ್ಲಿ ಯುದ್ಧ ನಿಲ್ಲುವವರೆಗೂ ನಾವು ರಷ್ಯಾದ ಮೇಲೆ ಒತ್ತಡ ಹೇರುವ ಕ್ರಮವನ್ನು ಮುಂದುವರಿಸಲಿದ್ದೇವೆ. ರಷ್ಯಾದ ಮೇಲೆ ಇನ್ನಷ್ಟು ನಿರ್ಬಂಧ ಹೇರುತ್ತೇವೆ. ರಷ್ಯಾದ ಯುದ್ಧದ ಆರ್ಥಿಕತೆಯು ನೆಲಸಮವಾಗಬೇಕು ಮತ್ತು ಶಾಂತಿ ಸ್ಥಾಪನೆಯಾಗಬೇಕು’ ಎಂದು ಒಕ್ಕೂಟ ಹೇಳಿದೆ.
‘ಉಕ್ರೇನ್–ರಷ್ಯಾ ಯುದ್ಧ ನಿಲ್ಲಿಸಲು ನ್ಯಾಟೊ ದೇಶಗಳ ಮಧ್ಯೆ ಇರುವ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಒಪ್ಪಂದದಂತೆಯೇ ಒಪ್ಪಂದವೊಂದನ್ನು ರೂಪಿಸಲು ಅಮೆರಿಕ ಮುಂದಾಗಿದೆ’ ಎಂದು ಇಟಲಿಯ ರಾಯಭಾರ ಕಚೇರಿಯ ಮೂಲಗಳು ಶನಿವಾರ ಹೇಳಿವೆ.
ನ್ಯಾಟೊ ದೇಶಗಳ ಮಧ್ಯೆ ಆರ್ಟಿಕಲ್ 5 ಎನ್ನುವ ಒಪ್ಪಂದವಿದೆ. ‘ನ್ಯಾಟೊ ಸದಸ್ಯ ದೇಶವೊಂದರ ಮೇಲೆ ಹೊರಗಿನವರು ಯಾರೇ ಯುದ್ಧ ಸಾರಿದರೂ ಆ ಸದಸ್ಯ ದೇಶದ ಬೆಂಬಲಕ್ಕೆ ಎಲ್ಲ ನ್ಯಾಟೊ ಸದಸ್ಯ ದೇಶಗಳು ಬರಬೇಕು’ ಎನ್ನುತ್ತದೆ ಆರ್ಟಿಕಲ್ 5.
‘ನ್ಯಾಟೊ ಸೇರುವುದು ಬೇಡ. ಆದರೆ, ಆರ್ಟಿಕಲ್ 5ನಂಥ ಒಪ್ಪಂದ ಇರಬಹುದು ಎನ್ನುವ ಒಪ್ಪಂದವೊಂದನ್ನು ಅಮೆರಿಕವು ರೂಪಿಸಿದೆ. ಈ ಒಪ್ಪಂದಕ್ಕೆ ಪುಟಿನ್ ಅವರೂ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ’ ಎಂದು ಮೂಲಗಳು ಹೇಳಿವೆ.
‘ಐರೋಪ್ಯ ದೇಶಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದಾಗ, ಟ್ರಂಪ್ ಅವರು ಈ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಬಹುದು ಎಂದು ಐರೋಪ್ಯ ದೇಶಗಳೂ ಹೇಳಿವೆ’ ಎಂದೂ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.