ಕೀವ್: ‘ವಾಯುಪ್ರದೇಶ ರಕ್ಷಣಾ ವ್ಯವಸ್ಥೆ ಅಭಿವೃದ್ಧಿಪಡಿಸುವ ಮೂಲಕ ಇಡೀ ಯುರೋಪ್ ಖಂಡವನ್ನು ಸುರಕ್ಷಿತ ಪ್ರದೇಶವನ್ನಾಗಿ ರೂಪಿಸಬೇಕು’ ಎಂದು ಐರೋಪ್ಯ ರಾಷ್ಟ್ರಗಳ ಮುಖಂಡರನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಒತ್ತಾಯಿಸಿದ್ದಾರೆ.
ಝಪೋರಿಝಿಯಾ ನಗರದ ಮೇಲೆ ರಷ್ಯಾ ಪಡೆಗಳು ರಾತ್ರೋರಾತ್ರಿ ನಡೆಸಿದ ವೈಮಾನಿಕ ದಾಳಿಗಳಲ್ಲಿ 13 ಜನರು ಗಾಯಗೊಂಡ ಬೆನ್ನಲ್ಲೇ, ಝೆಲೆನ್‌ಸ್ಕಿ ಅವರಿಂದ ಈ ಒತ್ತಾಯ ಕೇಳಿಬಂದಿದೆ.
‘ಯುರೋಪ್ ರಾಷ್ಟ್ರಗಳ ವಾಯುಪ್ರದೇಶದಲ್ಲಿ ಹಲವು ಹಂತಗಳ ರಕ್ಷಣಾ ವ್ಯವಸ್ಥೆ ಅಳವಡಿಸುವುದು ಇಂದಿನ ತುರ್ತು. ಇದಕ್ಕೆ ಅಗತ್ಯವಿರುವ ಎಲ್ಲ ತಂತ್ರಜ್ಞಾನಗಳು ಲಭ್ಯ ಇವೆ. ಆದರೆ, ಇದರ ಅನುಷ್ಠಾನಕ್ಕಾಗಿ ಹೂಡಿಕೆ ಹಾಗೂ ಒತ್ತಾಸೆ ಬೇಕು. ಈ ನಿಟ್ಟಿನಲ್ಲಿ ಎಲ್ಲ ದೇಶಗಳು ಕಾರ್ಯಪ್ರವೃತ್ತವಾಗಬೇಕು’ ಎಂದು ಅವರು ಸಾಮಾಜಿಕ ಮಾಧ್ಯಮ ‘ಟೆಲಿಗ್ರಾಮ್’ನಲ್ಲಿ ಬರೆದುಕೊಂಡಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಪ್ರಾರಂಭವಾಗಿ ಮೂರೂವರೆ ವರ್ಷಗಳು ಕಳೆದಿವೆ. ಈ ನಡುವೆ, ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸುವುದನ್ನು ರಷ್ಯಾ ನಿಲ್ಲಿಸಿಲ್ಲ. ರಷ್ಯಾ ಪಡೆಗಳು ಉಕ್ರೇನ್ ಒಳಗೆ ಅಂದಾಜು ಸಾವಿರ ಕಿ.ಮೀ.ನಷ್ಟು ನುಗ್ಗಿರುವುದು ಗಮನಾರ್ಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.