ADVERTISEMENT

ಕೋವಿಡ್‌: ಭಾರತದಿಂದ ವಿಮಾನ ಸಂಚಾರ ನಿರ್ಬಂಧ ಹೆಚ್ಚಿಸಿದ ಬ್ರಿಟನ್‌, ಆಸ್ಟ್ರೇಲಿಯಾ

ಪಿಟಿಐ
Published 22 ಏಪ್ರಿಲ್ 2021, 11:31 IST
Last Updated 22 ಏಪ್ರಿಲ್ 2021, 11:31 IST
ಲಂಡನ್‌ ಹೀಥ್ರೂ ವಿಮಾನನಿಲ್ದಾಣದ ಹೊರವಲಯದ ದೃಶ್ಯ (ಸಂಗ್ರಹ ಚಿತ್ರ).
ಲಂಡನ್‌ ಹೀಥ್ರೂ ವಿಮಾನನಿಲ್ದಾಣದ ಹೊರವಲಯದ ದೃಶ್ಯ (ಸಂಗ್ರಹ ಚಿತ್ರ).   

ಲಂಡನ್‌: ಅಂತರರಾಷ್ಟ್ರೀಯ ಪ್ರಯಾಣಕ್ಕೆ ಸಂಬಂಧಿಸಿ ಭಾರತವನ್ನು ‘ಕೆಂಪುಪಟ್ಟಿಗೆ’ ಸೇರಿಸಿದ ಹಿಂದೆಯೇ, ಲಂಡನ್‌ನ ಅತಿದೊಡ್ಡ ವಿಮಾನನಿಲ್ದಾಣ ’ಹೀಥ್ರೂ’ ಆಡಳಿತ ವರ್ಗವು, ಭಾರತದಿಂದ ಹೆಚ್ಚುವರಿ ವಿಮಾನಗಳ ಆಗಮನಕ್ಕೆ ಅವಕಾಶವನ್ನು ನಿರಾಕರಿಸಿದೆ. ಕೆಂಪುಪಟ್ಟಿಗೆ ಸೇರಿಸಿದ ಆದೇಶ ಶುಕ್ರವಾರದಿಂದ ಜಾರಿಗೆ ಬರಲಿದೆ.

ನಿಲ್ದಾಣದ ಪಾಸ್‌ಪೋರ್ಟ್ ಕಂಟ್ರೊಲ್ ವಿಭಾಗದಲ್ಲಿ ಈಗಾಗಲೇ ದೊಡ್ಡ ಸಾಲು ಮತ್ತು ಒತ್ತಡ ಇದೆ ಎಂದೂ ಆಡಳಿತವು ಅವಕಾಶ ನಿರಾಕರಣೆಗೆ ಕಾರಣ ನೀಡಿದೆ. ಭಾರತದಲ್ಲಿ ಕಾಣಿಸಿರುವ ಕೊರೊನಾ ಸೋಂಕು ಮಾದರಿಯ 103 ಪ್ರಕರಣ ಪತ್ತೆಯಾದ ನಂತರ ಈ ವಾರದ ಆರಂಭದಲ್ಲಿ ಭಾರತವನ್ನು ಕೆಂಪುಪಟ್ಟಿಗೆ ಸೇರಿಸಲು ಬ್ರಿಟನ್‌ ತೀರ್ಮಾನಿಸಿತ್ತು.

ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಮುಂಜಾಗ್ರತೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜನಪ್ರತಿನಿಧಿಗಳ ಸಭೆಗೆ ಗೃಹ ಕಾರ್ಯದರ್ಶಿ ಮ್ಯಾಟ್‌ ಹಾಂಕೊಕ್ ತಿಳಿಸಿದ್ದರು. ಕೆಂಪುಪಟ್ಟಿಗೆ ಸೇರ್ಪಡೆ ಎಂದರೆ ಕಳೆದ 10 ದಿನ ಭಾರತದಲ್ಲಿರುವ ಯು.ಕೆ, ಐರಿಶ್‌ ನಿವಾಸಿಗಳು ಅಥವಾ ಬ್ರಿಟಿಷ್‌ ಪ್ರಜೆ ದೇಶಕ್ಕೆ ಮರಳಲು ಅವಕಾಶವಿಲ್ಲ.

ADVERTISEMENT

ವಿಮಾನಗಳ ಸಂಖ್ಯೆ ಕಡಿತ: ಆಸ್ಟ್ರೇಲಿಯಾ ಪ್ರಧಾನಿ ಹೇಳಿಕೆ

ಕೋವಿಡ್ ಪ್ರಕರಣ ಹಿನ್ನೆಲೆಯಲ್ಲಿ ಭಾರತದಿಂದ ದೇಶಕ್ಕೆ ಸಂಪರ್ಕ ಕಲ್ಪಿಸುವ ವಿಮಾನಗಳ ಸಂಖ್ಯೆಯನ್ನು ಕಡಿತಗೊಳಿಸಲು ಆಸ್ಟ್ರೇಲಿಯಾ ಸರ್ಕಾರ ನಿರ್ಧರಿಸಿದೆ. ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಈ ತೀರ್ಮಾನ ಪ್ರಕಟಿಸಿದ್ದು, ಕೋವಿಡ್ ಪ್ರಕರಣ ಹೆಚ್ಚಿದ್ದು, ಭಾರತದಲ್ಲಿ ಹೆಚ್ಚು ಅಪಾಯದ ಸ್ಥಿತಿ ಇದೆ ಎಂದಿದ್ದಾರೆ.

ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಪ್ರಧಾನಿ, ವಿಮಾನಗಳ ಸಂಖ್ಯೆಯನ್ನು ಶೇ 30ರಷ್ಟು ಕಡಿತಗೊಳಿಸಲಾಗುವುದು. ಕೋವಿಡ್ ದೃಷ್ಟಿಯಿಂದ ಅಧಿಕ ಅಪಾಯವಿರುವ ದೇಶಗಳ ಪಟ್ಟಿ ಇನ್ನೂ ಅಂತಿಮವಾಗಬೇಕಿದೆ. ಆದರೆ, ಎರಡನೇ ಅಲೆ ಅವಧಿಯಲ್ಲಿ ಭಾರತದಲ್ಲಿ ಗಂಭೀರವಾದ ಸ್ಥಿತಿ ಇದೆ ಎಂದು ಹೇಳಿದರು.

ಅಲ್ಲದೆ, ಆಸ್ಟ್ರೇಲಿಯನ್ನರು ಅಧಿಕ ಅಪಾಯವಿರುವ ಭಾರತದಂತಹ ದೇಶಕ್ಕೆ ತೆರಳುವುದರ ಮೇಲೂ ನಾವು ಮಿತಿ ಹೇರಲಿದ್ದೇವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.