ADVERTISEMENT

ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್ ವಿರುದ್ಧ ಟ್ರಸ್‌ ಹೇಳಿಕೆಗೆ ಖಂಡನೆ

ಪಿಟಿಐ
Published 26 ಆಗಸ್ಟ್ 2022, 14:11 IST
Last Updated 26 ಆಗಸ್ಟ್ 2022, 14:11 IST
ಲಿಜ್‌ ಟ್ರಸ್
ಲಿಜ್‌ ಟ್ರಸ್   

ಲಂಡನ್: ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರಾನ್‌ ಕುರಿತು ಬ್ರಿಟನ್‌ ಪ್ರಧಾನಿ ಸ್ಥಾನದ ಅಭ್ಯರ್ಥಿ ಲಿಜ್‌ ಟ್ರಸ್‌ ಅವರು ನೀಡಿರುವ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ನಾರ್ವಿಕ್‌ ನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ತೂರಿ ಬಂದ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ಟ್ರಸ್‌ ಅವರು ನೀಡಿದ ಉತ್ತರ ಟೀಕೆಗೊಳಗಾಗಿದೆ.

‘ಮ್ಯಾಕ್ರಾನ್‌ ಅವರು ಬ್ರಿಟನ್‌ನ ಮಿತ್ರರೇ ಅಥವಾ ಶತ್ರು’ ಎಂಬ ಪ್ರಶ್ನೆಯನ್ನು ಟ್ರಸ್‌ ಅವರಿಗೆ ಕೇಳಲಾಗಿತ್ತು. ‘ಮ್ಯಾಕ್ರಾನ್‌ ಅವರು ಬ್ರಿಟನ್‌ನ ಮಿತ್ರ ಅಥವಾ ಶತ್ರು ಎಂಬುದನ್ನು ಈಗಲೇ ಹೇಳಲಾಗದು. ಒಂದು ವೇಳೆ ನಾನು ಪ್ರಧಾನಿಯಾಗಿ ಆಯ್ಕೆಯಾದಲ್ಲಿ, ಮಾತುಗಳ ಬದಲಾಗಿ ಅವರು ಕೈಗೊಂಡ ಕಾರ್ಯಗಳನ್ನು ನೋಡಿದ ಮೇಲೆ ಮ್ಯಾಕ್ರಾನ್‌ ನಮ್ಮ ಮಿತ್ರ ಅಥವಾ ಶತ್ರುವೇ ಎಂಬುದನ್ನು ನಿರ್ಧರಿಸುತ್ತೇನೆ’ ಎಂದು ಟ್ರಸ್‌ ಉತ್ತರಿಸಿದ್ದರು.

ADVERTISEMENT

ಇದೇ ಪ್ರಶ್ನೆಗೆ, ಪ್ರಧಾನಿ ಹುದ್ದೆಯ ಮತ್ತೊಬ್ಬ ಅಭ್ಯರ್ಥಿ ರಿಷಿ ಸುನಕ್‌ ಅವರು, ‘ಮ್ಯಾಕ್ರಾನ್‌ ಅವರು ಬ್ರಿಟನ್‌ನ ಸ್ನೇಹಿತ. ನಾನು ಪ್ರಧಾನಿಯಾಗಿ ಆಯ್ಕೆಯಾದಲ್ಲಿ ಫ್ರಾನ್ಸ್‌ ಸೇರಿದಂತೆ ಯುರೋಪ್‌ನೊಂದಿಗಿನ ನಮ್ಮ ಸಂಬಂಧವನ್ನು ಮತ್ತಷ್ಟು ಸುಧಾರಿಸಲು ಪ್ರಯತ್ನಿಸುವೆ’ ಎಂದು ಉತ್ತರಿಸಿದರು.

ವಿರೋಧ ಪಕ್ಷವಾದ ಲೇಬರ್‌ ಪಾರ್ಟಿ ಮುಖಂಡರು ಟ್ರಸ್‌ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ‘ಟ್ರಸ್‌ ಹೇಳಿಕೆ ದುರದೃಷ್ಟಕರ. ಬ್ರಿಟನ್‌ನ ಮಿತ್ರರಾಷ್ಟ್ರವೊಂದಕ್ಕೆ ಮಾಡಿದ ಅವಮಾನ’ ಎಂದೂ ಟೀಕಿಸಿದ್ದಾರೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮ್ಯಾಕ್ರಾನ್, ‘ಯಾರೇ ಬ್ರಿಟನ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಲಿ, ಬ್ರಿಟನ್‌ ಯಾವತ್ತಿಗೂ ಫ್ರಾನ್ಸ್‌ನ ಮಿತ್ರ ರಾಷ್ಟ್ರವಾಗಿರುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.