ADVERTISEMENT

ಸಿರಿಯಾಕ್ಕೆ ₹32.55 ಸಾವಿರ ಕೋಟಿ ನೆರವು: ವಿಶ್ವಸಂಸ್ಥೆ ಘೋಷಣೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2023, 12:46 IST
Last Updated 15 ಫೆಬ್ರುವರಿ 2023, 12:46 IST
   

ವಿಶ್ವಸಂಸ್ಥೆ/ಬೈರೂತ್: ಭೀಕರ ಭೂಕಂಪದಿಂದ ತತ್ತರಿಸಿರುವ ವಾಯವ್ಯ ಸಿರಿಯಾಕ್ಕೆ ಸುಮಾರು ₹32.55 ಸಾವಿರ ಕೋಟಿ ನೆರವು ಘೋಷಿಸಿದ ವಿಶ್ವಸಂಸ್ಥೆ, ಈ ದುರಂತದಲ್ಲಿ ಬದುಕುಳಿದ ಸಿರಿಯಾದ ಸುಮಾರು 50 ಲಕ್ಷ ಜನರಿಗೆ ಅಗತ್ಯ ನೆರವು ನೀಡುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಬುಧವಾರ ಕರೆ ನೀಡಿದೆ.

ಟರ್ಕಿಯಿಂದ ಸಿರಿಯಾ ಪ್ರವೇಶಿಸಲು ಎರಡು ಮಾರ್ಗಗಳನ್ನು ಮೂರು ತಿಂಗಳ ಅವಧಿಗೆ ತೆರೆಯಲು ಸಿರಿಯಾ ಅಧ್ಯಕ್ಷ ಬಶರ್‌ ಅಸ್ಸಾದ್‌ ಮತ್ತು ವಿಶ್ವಸಂಸ್ಥೆಯ ಮಧ್ಯೆ ಒಡಂಬಡಿಕೆ ನಡೆದಿದೆ. ಇದನ್ನು ಸ್ವಾಗತಿಸಿದ ಮರುದಿನವೇ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ನೆರವು ಘೋಷಿಸಿದರು.

ಸಿರಿಯಾ ಮಿತ್ರ ರಾಷ್ಟ್ರ ರಷ್ಯಾದ ಒತ್ತಾಯದ ಮೇರೆಗೆ ಬಾಬ್ ಅಲ್-ಹಾವಾದಲ್ಲಿ ಒಂದೇ ಮಾರ್ಗದ ಮೂಲಕ ವಾಯವ್ಯ ಇದ್ಲಿಬ್‌ ಪ್ರದೇಶಕ್ಕೆ ನೆರವು ನೀಡಲು ವಿಶ್ವಸಂಸ್ಥೆ ಅವಕಾಶ ಕಲ್ಪಿಸಿದೆ.

ADVERTISEMENT

ಫೆ.6ರಂದು ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ 7.8ರಷ್ಟು ತೀವ್ರತೆಯ ಭೂಕಂಪದಿಂದ ಆಗಿರುವ ವಿನಾಶದ ಪ್ರಮಾಣವು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಭೀಕರವಾದುದು. 12 ವರ್ಷಗಳ ನಾಗರಿಕ ಯುದ್ಧದಿಂದ ಮೊದಲೇ ಸಿರಿಯಾ ತತ್ತರಿಸಿತ್ತು. ಈ ದುರಂತದಲ್ಲಿ ಜನರ ಜೀವ ರಕ್ಷಣೆಗೆ ಸದ್ಯ ಕೊಡಲಾಗುತ್ತಿರುವ ನೆರವು ಏನೇನೂ ಸಾಕಾಗುತ್ತಿಲ್ಲ. ಈ ನೆರವಿನ ಮೊತ್ತದಲ್ಲಿ 50 ಲಕ್ಷ ಜನರಿಗೆ ಮೂರು ತಿಂಗಳ ಮಟ್ಟಿಗೆ ಆಶ್ರಯ, ಆರೋಗ್ಯ ರಕ್ಷಣೆ, ಆಹಾರ ಮತ್ತು ಭದ್ರತೆ ಒದಗಿಸಬಹುದು. ತುರ್ತು ನಿಧಿಯನ್ನು ಯಾವುದೇ ವಿಳಂಬ ಮಾಡದೆ, ವಿಶ್ವ ಸಮುದಾಯ ಒದಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಪ್ರಾಕೃತಿಕ ಮಹಾ ವಿಪತ್ತಿನಿಂದ ಬಳಲುತ್ತಿರುವ ಪ್ರದೇಶಕ್ಕೆ ಪರಿಹಾರ ಸಾಮಗ್ರಿ ಸಾಗಿಸಲು, ಧನಸಹಾಯ ಒದಗಿಸಲು ಮಾನವ ನಿರ್ಮಿತ ಅಡೆತಡೆಗಳಿಂದ ಪ್ರವೇಶ ತಡೆಯುವುದು ಪರಿಸ್ಥಿತಿಯನ್ನು ಮತ್ತಷ್ಟು ಭೀಕರಗೊಳಿಸುತ್ತದೆ. ಸಿರಿಯಾಕ್ಕೆ ಅಗತ್ಯ ನೆರವು ಎಲ್ಲ ಮಾರ್ಗಗಳಿಂದ ಯಾವುದೇ ನಿರ್ಬಂಧಗಳಿಲ್ಲದೆ ತಲುಪಬೇಕು ಎಂದು ಗುಟೆರಸ್‌ ಒತ್ತಿಹೇಳಿದ್ದಾರೆ.

ಇರಾನ್‌ನ ಡ್ರೋನ್‌ ಹೊಡೆದುರುಳಿಸಿದ ಅಮೆರಿಕ ಸೇನೆ: ಈಶಾನ್ಯ ಸಿರಿಯಾದಲ್ಲಿ ಅಮೆರಿಕದ ಸೇನಾ ಪಡೆಗಳ ವಸತಿ ಪ್ರದೇಶದ ಮೇಲೆ ಹಾರಾಡುತ್ತಿದ್ದ ಇರಾನ್‌ ನಿರ್ಮಿತ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ಸೇನೆ ಬುಧವಾರ ತಿಳಿಸಿದೆ.

ಹೊಡೆದುರುಳಿಸುವುದಕ್ಕೂ ಮೊದಲು ಡ್ರೋನ್‌, ಸೇನಾ ಪಡೆಗಳು ನೆಲೆಸಿರುವ ವಸತಿ ಪ್ರದೇಶಗಳ ಮೇಲೆ ಮಂಗಳವಾರ ಹಾರಾಟ ನಡೆಸಿತ್ತು ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿಕೆಯಲ್ಲಿ ತಿಳಿಸಿದೆ.

ಯುದ್ಧಪೀಡಿತ ಸಿರಿಯಾದಲ್ಲಿ ಭೂಕಂಪದ ನಂತರ ಗಣನೀಯ ಪ್ರಮಾಣದಲ್ಲಿ ಹಿಂಸಾಚಾರ ತಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.