ADVERTISEMENT

ಶಾಂತಿಪಾಲನಾ ಪಡೆಗೆ 2 ಲಕ್ಷ ಲಸಿಕೆ: ಭಾರತಕ್ಕೆ ವಿಶ್ವಸಂಸ್ಥೆಯಿಂದ ಕೃತಜ್ಞತೆ

ಪಿಟಿಐ
Published 18 ಫೆಬ್ರುವರಿ 2021, 9:01 IST
Last Updated 18 ಫೆಬ್ರುವರಿ 2021, 9:01 IST
ಆ್ಯಂಟೊನಿಯೊ ಗುಟೆರಸ್‌
ಆ್ಯಂಟೊನಿಯೊ ಗುಟೆರಸ್‌   

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ 2 ಲಕ್ಷ ಡೋಸ್‌ ಕೋವಿಡ್‌–19ರ ಲಸಿಕೆಯ ಕೊಡುಗೆ ಘೋಷಿಸಿದ ಭಾರತಕ್ಕೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯನ್ನು ಉದ್ದೇಶಿಸಿ ಬುಧವಾರ ಮಾತನಾಡುವಾಗ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಈ ಕುರಿತು ಘೋಷಣೆ ಮಾಡಿದ್ದರು.

ಕಠಿಣ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ 2 ಲಕ್ಷ ಕೋವಿಡ್‌ ಲಸಿಕೆಯನ್ನು ಕೊಡುಗೆಯಾಗಿ ನೀಡುವುದಾಗಿ ಅವರು ಘೋಷಿಸಿದ್ದರು.

ADVERTISEMENT

‘ಈ ಘೋಷಣೆ ಮಾಡಿದ ಭಾರತದ ನಿಯೋಗಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ಲಸಿಕೆಯ ಡೋಸ್‌ಗಳನ್ನು ಸಮರ್ಪಕವಾಗಿ ನೀಡಲು ವ್ಯವಸ್ಥೆ ಮಾಡಲಾಗುವುದು’ ಎಂದು ಪ್ರಧಾನ ಕಾರ್ಯದರ್ಶಿ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ 121 ದೇಶಗಳ 94,484 ಸಿಬ್ಬಂದಿ ಇದ್ದಾರೆ. ಇವರು ವಿಶ್ವದ 12 ಕಡೆಗಳಲ್ಲಿ ಶಾಂತಿಪಾಲನಾ ಕಾರ್ಯದಲ್ಲಿ ತೊಡಗಿದ್ದಾರೆ. ಭಾರತ ಘೋಷಿಸಿರುವ ಲಸಿಕೆಯಿಂದಾಗಿ ಈ ಸಿಬ್ಬಂದಿಗೆ ಎರಡು ಬಾರಿ ಲಸಿಕೆ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತದ ಈ ಕ್ರಮವನ್ನು ವಿವಿಧ ದೇಶಗಳ ರಾಯಭಾರಿಗಳು ಸ್ವಾಗತಿಸಿದ್ದಾರೆ. ಜತೆಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.