ADVERTISEMENT

ಮಹಿಳೆಯ ಹಕ್ಕುಗಳ ವ್ಯವಸ್ಥಿತ ಉಲ್ಲಂಘನೆ: ವಿಶ್ವಸಂಸ್ಥೆ ಸಮಿತಿಯಿಂದ ಇರಾನ್‌ಗೆ ಕೊಕ್

ಏಜೆನ್ಸೀಸ್
Published 15 ಡಿಸೆಂಬರ್ 2022, 12:52 IST
Last Updated 15 ಡಿಸೆಂಬರ್ 2022, 12:52 IST
ಪೊಲೀಸರ ವಶದಲ್ಲಿದ್ದ ಮಹಿಳೆ ಮಾಶಾ ಅಮಿನಿ ಶಂಕಾಸ್ಪದ ಸಾವು ಖಂಡಿಸಿ ಇಸ್ತಾನ್‌ಬುಲ್‌ನಲ್ಲಿ ನಡೆದಿದ್ದ ಪ್ರತಿಭಟನೆಯ ಸಂಗ್ರಹ ಚಿತ್ರ – ಎಎಫ್‌ಪಿ
ಪೊಲೀಸರ ವಶದಲ್ಲಿದ್ದ ಮಹಿಳೆ ಮಾಶಾ ಅಮಿನಿ ಶಂಕಾಸ್ಪದ ಸಾವು ಖಂಡಿಸಿ ಇಸ್ತಾನ್‌ಬುಲ್‌ನಲ್ಲಿ ನಡೆದಿದ್ದ ಪ್ರತಿಭಟನೆಯ ಸಂಗ್ರಹ ಚಿತ್ರ – ಎಎಫ್‌ಪಿ   

ವಿಶ್ವಸಂಸ್ಥೆ: ಮಹಿಳೆಯರು, ಬಾಲಕಿಯರ ಹಕ್ಕುಗಳ ವ್ಯವಸ್ಥಿತ ಉಲ್ಲಂಘನೆಯಾಗುತ್ತಿದೆ ಎಂಬ ಆರೋಪದಡಿ ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣ ಹಕ್ಕುಗಳಿಗೆ ಹೋರಾಡುವ ಜಾಗತಿಕ ಸಮಿತಿಯಿಂದ ಇರಾನ್‌ ಅನ್ನು ವಿಶ್ವಸಂಸ್ಥೆ ಮಂಡಳಿಯು ಕೈಬಿಟ್ಟಿದೆ.

‘ಇದೊಂದು ಐಸಿಹಾಸಿಕ ನಿರ್ಧಾರ’ ಎಂದು ಬಣ್ಣಿಸಲಾಗಿದೆ. ಈ ಬಗ್ಗೆ ನಿರ್ಣಯ ಅಂಗೀಕರಿಸಿದ ವಿಶ್ವಸಂಸ್ಥೆ ಸಾಮಾಜಿಕ ಮತ್ತು ಆರ್ಥಿಕ ಮಂಡಳಿ ಸಭೆಯಿಂದ ಭಾರತ ಹೊರಗುಳಿಯಿತು. ‘ಇದು ತಿರುಚಲಾದ ಆರೋಪಗಳನ್ನು ಆಧರಿಸಿದ ನಿರ್ಧಾರ‘ ಎಂದು ಇರಾನ್‌ ಪ್ರತಿಕ್ರಿಯಿಸಿದೆ.

ಅಮೆರಿಕ ಈ ಕುರಿತ ನಿರ್ಣಯವನ್ನು ಮಂಡಿಸಿತ್ತು. ಇರಾನ್‌ನಲ್ಲಿ ನೈತಿಕ ಪೊಲೀಸರ ವಶದಲ್ಲಿದ್ದ 22 ವರ್ಷದ ಮಹಿಳೆಯು ಶಂಕಾಸ್ಪದವಾಗಿ ಮೃತಪಟ್ಟಿದ್ದನ್ನು ಖಂಡಿಸಿ ದೇಶದಾದ್ಯಂತ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಇರಾನ್ ಕಠಿಣ ಕ್ರಮಕೈಗೊಂಡಿತ್ತು.

ADVERTISEMENT

ಇರಾನ್‌ನ ಮಾನವ ಹಕ್ಕುಗಳ ಕಾರ್ಯಕರ್ತರ ಪ್ರಕಾರ, ಪ್ರತಿಭಟನೆ ಹತ್ತಿಕ್ಕುವ ಸಂಬಂಧ ನಡೆದಿದ್ದ ಹಿಂಸಾತ್ಮಕ ಕೃತ್ಯಗಳಲ್ಲಿ 488 ಪ್ರತಿಭಟನಕಾರರು ಮೃತಪಟ್ಟಿದ್ದರು. ಭದ್ರತಾ ಪಡೆಗಳು ಸುಮಾರು 18,200 ಪ್ರತಿಭಟನಕಾರರನ್ನು ವಶಕ್ಕೆ ಪಡೆದಿದ್ದವು.

ವಿಶ್ವಸಂಸ್ಥೆ ಸಾಮಾಜಿಕ ಮತ್ತು ಆರ್ಥಿಕ ಮಂಡಳಿ (ಇಸಿಒಎಸ್‌ಒಸಿ) ಸದಸ್ಯ ಬಲ 54 ಆಗಿದೆ. ಇರಾನ್‌ ಕೈಬಿಡುವ ನಿರ್ಣಯದ ಪರ 29, ವಿರುದ್ಧವಾಗಿ 8 ರಾಷ್ಟ್ರಗಳು ಮತಹಾಕಿದವು. 16 ರಾಷ್ಟ್ರಗಳು ಮತದಾನದಿಂದ ಹೊರಗುಳಿದವು. ಇರಾನ್‌ ಸದಸ್ಯತ್ವ 2026ರವರೆಗೆ ಇತ್ತು.

‘ಇದು ಐತಿಹಾಸಿಕ ನಿರ್ಧಾರ. ಸಕಾಲಿಕ ಕ್ರಮ ಕೈಗೊಳ್ಳಲಾಗಿದೆ. ಈ ನಿರ್ಧಾರದ ಮೂಲಕ ಇರಾನ್ ಸರ್ಕಾರಕ್ಕೆ ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ’ ಎಂದು ವಿಶ್ವಸಂಸ್ಥೆಯ ರಾಯಭಾರಿ ಲಿಂಡಾ ಥಾಮಸ್‌ ಅಭಿಪ್ರಾಯಪಟ್ಟರು.

ನಿರ್ಣಯದ ಮೇಲಿನ ಮತದಾನ ಪ್ರಕ್ರಿಯೆಯಿಂದ ಭಾರತ ಸೇರಿದಂತೆ ಒಟ್ಟು 16 ರಾಷ್ಟ್ರಗಳು ಹೊರಗುಳಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.