ADVERTISEMENT

ಕೊರೊನಾ: ವಿಶ್ವಸಂಸ್ಥೆ ನೆರವು ಕೇಳುವವರ ಸಂಖ್ಯೆ ಹೆಚ್ಚಳ ಸಂಭವ

ಬಡತನ ಸೃಷ್ಟಿಸುವ, ಹಸಿವಿನಿಂದ ಬಳಲುವವರ ಸಂಖ್ಯೆ ಹೆಚ್ಚಾಗುವ ಆತಂಕ

ಏಜೆನ್ಸೀಸ್
Published 1 ಡಿಸೆಂಬರ್ 2020, 8:00 IST
Last Updated 1 ಡಿಸೆಂಬರ್ 2020, 8:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಿನೇವಾ: ‌‘ಕೋವಿಡ್ 19‘ ಸಾಂಕ್ರಾಮಿಕದಿಂದಾಗಿ ವಿಶ್ವಸಂಸ್ಥೆಯ ನೆರವು ಕೇಳುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, 2021ರಲ್ಲಿ ಸುಮಾರು 2.5 ಕೋಟಿ ಜನರು ಸಹಾಯಕ್ಕಾಗಿ ಸಂಸ್ಥೆಯನ್ನು ಸಂಪರ್ಕಿಸಲಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವಿಷಯ ವಿಭಾಗದ ಕಚೇರಿ ಹೇಳಿದೆ.

ಈ ನೆರವಿನ ಪ್ರಮಾಣದ ಹೆಚ್ಚಾಗುತ್ತಿರುವುದರ ಹಿಂದೆ ಕೊರೊನಾ ವೈರಸ್‌ ಸಾಂಕ್ರಾಮಿಕದ ಜತೆ, ವಿಶ್ವದ ಹಲವಡೆ ನಡೆಯುತ್ತಿರುವ ಘರ್ಷಣೆಗಳು, ಬಲವಂತದ ವಲಸೆ ಮತ್ತು ಜಾಗತಿಕ ತಾಪಮಾನದಿಂದ ಉಂಟಾದ ಬೆಳವಣಿಗೆಗಳು ಸೇರಿದಂತೆ ವಿವಿಧ ಜಾಗತಿಕ ಸವಾಲುಗಳು ಸೇರಿವೆ.

‘ಪ್ರಸಕ್ತ ವರ್ಷಕ್ಕೆ ಹೋಲಿಸಿದರೆ, 2021ರಲ್ಲಿ ನೆರವು ಕೇಳುವವರ ಸಂಖ್ಯೆಯಲ್ಲಿ ಶೇ 40ರಷ್ಟು ಹೆಚ್ಚಬಹುದು‘ ಎಂದು ವಿಶ್ವ ಸಂಸ್ಥೆಯ ಮಾನವೀಯ ವ್ಯವಹಾರಗಳ ಸಂಯೋಜನಾ ಕಚೇರಿ(ಒಸಿಎಚ್‌ಎ) ನಿರೀಕ್ಷಿಸಿದೆ. ‘ಇದು ಕೊರೊನಾವೈರಸ್ ಸಾಂಕ್ರಾಮಿಕ ಹಾಗೂ ಇತರೆ ಸಮಸ್ಯೆಗಳು ತಂದೊಡ್ಡಿರುವ ನೋವು, ಸಂಕಟದ ಸೂಚನೆಯಾಗಿದೆ‘ ಎಂದು ಕಚೇರಿ ಹೇಳಿದೆ. ’ಲಸಿಕೆ ಲಭ್ಯವಾದ ನಂತರವೂ, ಸಮಸ್ಯೆಗಳು ಉಲ್ಬಣವಾಗಬಹುದು‘ ಎಂದು ಅಂದಾಜಿಸಲಾಗಿದೆ.

ADVERTISEMENT

ಒಸಿಎಚ್‌ಎ ಇತ್ತೀಚೆಗೆ ಬಿಡುಗಡೆ ಮಾಡಿದ ಜಾಗತಿಕ ಮಾನವೀಯ ವಿಶ್ಲೇಷಣಾ ವರದಿಯಲ್ಲಿ ಈ ಮಾಹಿತಿಯನ್ನು ಉಲ್ಲೇಖಿಸಿದೆ. ಈಗ ನೆರವು ಕೇಳುತ್ತಿರುವ 16 ಕೋಟಿ ಜನರನ್ನು ತಲುಪಲು, 35 ಬಿಲಿಯನ್ ಡಾಲರ್‌ ವೆಚ್ಚಾಗಲಿದೆ. ಇದು ದಾನಿಗಳು ನೀಡಿರುವ ದೇಣಿಗೆಯ (17 ಬಿಲಿಯನ್ ಡಾಲರ್‌) ಎರಡು ಪಟ್ಟಿನಷ್ಟಿದೆ. ಹೀಗಾಗಿ ಬೇಡಿಕೆ – ಪೂರೈಕೆಯ ಅಂಕಿ ಅಂಶಗಳು ಹೊಂದಿಕೆಯಾಗುತ್ತಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಈ ವರ್ಷ ಕೊರೊನಾ ಸಾಂಕ್ರಾಮಿಕದಿಂದಾಗಿ ಮಾನವೀಯ ನೆರವಿನ ಮೇಲೆ ಕಾರ್ಮೋಡ ಕವಿದಿದೆ. ಈ ರೋಗ ಭೂಮಿಯ ಮೇಲಿರುವ ದುರ್ಬಲ ದೇಶಗಳಲ್ಲಿ ನರಮೇಧವನ್ನೇ ನಡೆಸಿಬಿಟ್ಟಿದೆ‘ ಎಂದು ಒಸಿಎಚ್‌ಎ ಮುನ್ನಡೆಸುವ ವಿಶ್ವಸಂಸ್ಥೆಯ ಮಾನವೀಯ ವಿಭಾಗದ ಮುಖ್ಯಸ್ಥ ಮಾರ್ಕ್ ಲೋಕಾಕ್‌ ಹೇಳಿದರು.

‘1990 ರ ನಂತರ ಮೊದಲ ಬಾರಿಗೆ ವಿಶ್ವದಲ್ಲಿ ತೀವ್ರ ಬಡತನ ಹೆಚ್ಚಾಗಲಿದೆ, ಜೀವಿತಾವಧಿ ಕುಸಿಯುತ್ತದೆ. ಎಚ್‌ಐವಿ, ಕ್ಷಯ ಮತ್ತು ಮಲೇರಿಯಾದಿಂದ ವಾರ್ಷಿಕ ಸಾವಿನ ಸಂಖ್ಯೆ ದ್ವಿಗುಣಗೊಳ್ಳಲಿದೆ‘ ಎಂದು ಆತಂಕ ವ್ಯಕ್ತಪಡಿಸಿದ ಅವರು ‘ಹಸಿವಿನಿಂದ ಬಳಲುವವರ ಸಂಖ್ಯೆಯು ದ್ವಿಗುಣಗೊಳ್ಳಬಹುದೆಂಬ ಭಯವೂ ಇದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.