ಗಾಜಾಪಟ್ಟಿ ಸಮೀಪದ ಗಡಿಯಲ್ಲಿರುವ ಟ್ಯಾಂಕ್‌ಗಳ ಹತ್ತಿರ ಇಸ್ರೇಲ್ ಸೈನಿಕರು ನೆರೆದಿದ್ದರು
ಜಿನೀವಾ: ಗಾಜಾ ಪಟ್ಟಿಯಲ್ಲಿ ಹಮಾಸ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್, ‘ಲೈಂಗಿಕ ದೌರ್ಜನ್ಯ ಮತ್ತು ಇತರೆ ಲಿಂಗ ಆಧಾರಿತ ಹಿಂಸಾಚಾರವನ್ನು ವ್ಯವಸ್ಥಿತವಾಗಿ ನಡೆಸಿದೆ’ಎಂದು ವಿಶ್ವಸಂಸ್ಥೆ ಬೆಂಬಲಿತ ಮಾನವ ಹಕ್ಕುಗಳ ತಜ್ಞರು ಗುರುವಾರ ಆರೋಪಿಸಿದ್ದಾರೆ.
2023ರ ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿ ಬಳಿಕ ಆರಂಭವಾದ ಯುದ್ಧದಲ್ಲಿ ಈ ರೀತಿಯ ವ್ಯಾಪಕವಾದ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ವತಂತ್ರ ತಜ್ಞರ ಮಾನವ ಹಕ್ಕುಗಳ ಆಯೋಗವನ್ನು ವಿಶ್ವಸಂಸ್ಥೆಯು ನೇಮಕ ಮಾಡಿತ್ತು
ವಿಶ್ವಸಂಸ್ಥೆ ಬೆಂಬಲಿತ ತಂಡವು ಇಸ್ರೇಲ್ ವಿರೋಧಿಯಾಗಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಆರೋಪಿಸಿದ್ದಾರೆ. ‘ಇದು ಇಸ್ರೇಲ್ ವಿರೋಧಿ ಸರ್ಕಸ್, ದೀರ್ಘಕಾಲದಿಂದ ವಿಶ್ವಸಂಸ್ಥೆಯು ಯೆಹೂದಿಗಳ ವಿರೋಧಿಯಾಗಿದ್ದು, ಕೊಳೆತು ನಾರುವ ಭಯೋತ್ಪಾದಕ ಬೆಂಬಲಿತ ಮತ್ತು ಅಪ್ರಸ್ತುತ ಸಂಸ್ಥೆಯಾಗಿದೆ’ ಎಂದೂ ಹೇಳಿದ್ದಾರೆ.
ಅಪರಾಧಗಳ ಆರೋಪಗಳು ಮತ್ತು ಪುರಾವೆಗಳನ್ನು ಸೂಕ್ಷ್ಮವಾಗಿ ದಾಖಲಿಸಲು ಪ್ರಯತ್ನಿಸುವ ವಿಶ್ವಸಂಸ್ಥೆ ಬೆಂಬಲಿತ ಮಾನವ ಹಕ್ಕುಗಳ ಆಯೋಗ ಇದಾಗಿದ್ದು, ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಅಥವಾ ಇತರ ನ್ಯಾಯವ್ಯಾಪ್ತಿಗಳಲ್ಲಿ ಪ್ರಾಸಿಕ್ಯೂಟರ್‌ಗಳು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಇವುಗಳನ್ನು ಬಳಸಿಕೊಳ್ಳಬಹುದಾಗಿದೆ.
ಗುರುವಾರ ಬಿಡುಗಡೆಯಾದ ತನ್ನ ವರದಿಯಲ್ಲಿ ಆಯೋಗವು ಗಾಜಾದ ವ್ಯಾಪಕ ನಾಶ, ನಾಗರಿಕ ಪ್ರದೇಶಗಳಲ್ಲಿ ಭಾರೀ ಸ್ಫೋಟಕಗಳ ಬಳಕೆ ಮತ್ತು ಆಸ್ಪತ್ರೆಗಳು ಹಾಗೂ ಆರೋಗ್ಯ ಸೌಲಭ್ಯಗಳ ಮೇಲಿನ ಇಸ್ರೇಲಿ ದಾಳಿಗಳನ್ನು ಉಲ್ಲೇಖಿಸಿದೆ. ಈ ಮೂರೂ ದಾಳಿಗಳು ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಅಸಮಾನ ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ಅದು ಹೇಳಿದೆ.
ಪ್ಯಾಲೆಸ್ಟೀನ್ ಮಹಿಳೆಯರು, ಪುರುಷರು, ಯುವಕ ಮತ್ತು ಯುವತಿಯರ ವಿರುದ್ಧ ನಡೆಸಲಾದ ಹಲವು ದಾಳಿಗಳನ್ನು ಆಯೋಗವು ದಾಖಲಿಸಿದೆ. ಇಸ್ರೇಲ್ ಭದ್ರತಾ ಪಡೆಗಳು ಪ್ಯಾಲೆಸ್ಟೇನ್‌ನ ಬಂಧಿತರ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರವನ್ನು ನಡೆಸಿವೆ ಎಂದು ಆರೋಪಿಸಿದೆ.
ಜಿನೀವಾದಲ್ಲಿರುವ ಇಸ್ರೇಲ್‌ನ ನಿಯೋಗವು ಆರೋಪಗಳನ್ನು ತಳ್ಳಿಹಾಕಿದೆ. ಆಯೋಗವು ದೃಢೀಕರಣವಿಲ್ಲದ ಮೂಲಗಳನ್ನು ಅವಲಂಬಿಸಿದೆ ಎಂದು ಆರೋಪಿಸಿದೆ.
ಲೈಂಗಿಕ ದೌರ್ಜನ್ಯಗಳು, ಆರೋಗ್ಯ ಸೌಲಭ್ಯಗಳ ವ್ಯವಸ್ಥಿತ ನಾಶಮಾಡುವ ಮೂಲಕ ಇಸ್ರೇಲ್ ನರಮೇಧದ ಕೃತ್ಯಗಳನ್ನು ನಡೆಸಿದೆ ಎಂದು ಆಯೋಗದ ಸದಸ್ಯ ಸಿಡೋಟಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.