ADVERTISEMENT

ಅಫ್ಗಾನಿಸ್ಥಾನದಿಂದ 4 ಲಕ್ಷ ಜನರು ಸ್ಥಳಾಂತರ: ವಿಶ್ವಸಂಸ್ಥೆ ಕಳವಳ

ಪಿಟಿಐ
Published 12 ಆಗಸ್ಟ್ 2021, 6:59 IST
Last Updated 12 ಆಗಸ್ಟ್ 2021, 6:59 IST
ತಾಲಿಬಾನ್– ಅಫ್ಗನಿಸ್ತಾನದ ಭದ್ರತಾ ಪಡೆಗಳ ನಡುವಿನ ಸಂಘರ್ಷದಿಂದಾಗಿ ಅಫ್ಗಾನಿಸ್ತಾನದ ಕುಂದೂಜ್‌, ತಖಾರ್‌ ಮತ್ತು ಬಗ್ಲಾನ್ ಪ್ರಾಂತ್ಯದಿಂದ ಸ್ಥಳಾಂತರಗೊಂಡಿರುವ ಕುಟುಂಬಗಳು ಕಾಬೂಲ್‌ನ ಸಾರ–ಇ–ಶಾಮಲಿಯಲ್ಲಿ ನಿರ್ಮಿಸಿರುವ ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯಪಡೆದಿರುವುದು.
ತಾಲಿಬಾನ್– ಅಫ್ಗನಿಸ್ತಾನದ ಭದ್ರತಾ ಪಡೆಗಳ ನಡುವಿನ ಸಂಘರ್ಷದಿಂದಾಗಿ ಅಫ್ಗಾನಿಸ್ತಾನದ ಕುಂದೂಜ್‌, ತಖಾರ್‌ ಮತ್ತು ಬಗ್ಲಾನ್ ಪ್ರಾಂತ್ಯದಿಂದ ಸ್ಥಳಾಂತರಗೊಂಡಿರುವ ಕುಟುಂಬಗಳು ಕಾಬೂಲ್‌ನ ಸಾರ–ಇ–ಶಾಮಲಿಯಲ್ಲಿ ನಿರ್ಮಿಸಿರುವ ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯಪಡೆದಿರುವುದು.   

ವಿಶ್ವಸಂಸ್ಥೆ: ಅಫ್ಗಾನಿಸ್ತಾನದಿಂದ, ಅಮೆರಿಕ ತನ್ನ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಆರಂಭಿಸಿದ ನಂತರ, ಅಲ್ಲಿನ ಭದ್ರತಾ ಪರಿಸ್ಥಿತಿ ತೀವ್ರ ಹದಗೆಡುತ್ತಿದ್ದು ಪರಿಣಾಮವಾಗಿ ಈ ವರ್ಷದ ಆರಂಭದಿಂದ ಸುಮಾರು ನಾಲ್ಕು ಲಕ್ಷ ಜನರು ಹೊಸದಾಗಿ ಸ್ಥಳಾಂತರಗೊಂಡಿದ್ದಾರೆ. ಮೇ ತಿಂಗಳಲ್ಲಿ ಈ ಪ್ರಮಾಣ ತೀವ್ರವಾಗಿತ್ತು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್‌ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವರ್ಷದ ಆರಂಭದಿಂದ ಅಫ್ಗಾನಿಸ್ತಾನದಾದ್ಯಂತ ಸುಮಾರು 3,90,000 ಜನರು ಹೊಸದಾಗಿ ಸ್ಥಳಾಂತರಗೊಂಡಿದ್ದಾರೆ. ಮೇ ತಿಂಗಳಿನಿಂದ ಈ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ‘ ಎಂದು ಮಾಹಿತಿ ನೀಡಿದರು.

ಅಫ್ಗಾನಿಸ್ತಾನದಲ್ಲಿ, ಮೇ 1 ರಿಂದ ಅಮೆರಿಕ ತನ್ನ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಆರಂಭಿಸಿದೆ. ಆಗಸ್ಟ್‌ 31ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಅಮೆರಿಕ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಆರಂಭಿಸಿದಾಗಿನಿಂದ, ಅಫ್ಗಾನಿಸ್ತಾನದಲ್ಲಿ ಸರಣಿಯಾಗಿ ಭಯೋತ್ಪಾದಕ ದಾಳಿಗಳು ನಡೆದಿವೆ. ತಾಲಿಬಾನ್‌ ಬಂಡುಕೋರರ ಉಪಟಳ ಹೆಚ್ಚಾದಂತೆ ಜನರ ಸ್ಥಳಾಂತರ ಪ್ರಮಾಣದಲ್ಲೂ ಏರಿಕೆಯಾಗುತ್ತಿದೆ ಎಂದು ಅವರು ತಿಳಿಸಿದರು.

ADVERTISEMENT

ವಿಶ್ವಸಂಸ್ಥೆಯ ಮಾನವೀಯ ವಿಭಾಗದ ಸಹೋದ್ಯೋಗಿಗಳ ಪ್ರಕಾರ, ‘ಜುಲೈ 1 ಮತ್ತು ಆಗಸ್ಟ್‌ 5ರ ನಡುವೆ, ಅಫ್ಗಾನಿಸ್ತಾನದ 5800 ಮಂದಿ ಆಂತರಿಕವಾಗಿ ಸ್ಥಳಾಂತರಗೊಂಡು, ಕಾಬೂಲ್‌ಗೆ ಬಂದಿದ್ದಾರೆ. ಅವರು ಸಂಘರ್ಷ ಮತ್ತು ಇತರೆ ಬೆದರಿಕೆಗಳಿಂದ ರಕ್ಷಣೆ ಕೇಳುತ್ತಿದ್ದಾರೆ. ಹೀಗೆ ವಲಸೆ ಬಂದಿರುವವರಿಗೆ ಆಹಾರ, ನೀರು,ಅಗತ್ಯ ಗೃಹೋಪಯೋಗಿ ವಸ್ತುಗಳು ಮತ್ತು ನೈರ್ಮಲ್ಯಕ್ಕೆ ಸಂಬಂಧಿದಂತೆ ನೆರವು ನೀಡಲಾಗುತ್ತಿದೆ.

ಆಂತರಿಕವಾಗಿ ಸ್ಥಳಾಂತರಗೊಂಡು ಕಾಬೂಲ್‌ನಲ್ಲಿ ಉಳಿದಿರುವ ಜನರು ಸ್ನೇಹಿತರು ಮತ್ತು ಕೆಲವು ಕುಟುಂಬಗಳ ಬಳಿ ಆತಿಥ್ಯ ಪಡೆಯುತ್ತಿದ್ದಾರೆ. ಇದೇ ವೇಳೆ ಬಯಲಿನಲ್ಲಿ ವಾಸ್ತವ್ಯ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಉದ್ಯಾನವನ ಮತ್ತು ತೆರೆದ ಸ್ಥಳಗಳಲ್ಲಿ ಹೊರಗೆ ಇರುವ ಜನರ ಪರಿಸ್ಥಿತಿಯ ಬಗ್ಗೆ ಗಮನ ಇಡಲು ಹತ್ತು ತಂಡಗಳನ್ನು ನಿಯೋಜಿಸಲಾಗಿದೆ‘ ಎಂದು ಡುಜಾರಿಕ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.