ADVERTISEMENT

ವಾಣಿಜ್ಯ, ವಹಿವಾಟು: ಚೀನಾ ಜತೆ ಬೈಡನ್‌ ಚರ್ಚೆ ಸಾಧ್ಯತೆ ಕಡಿಮೆ

ಏಜೆನ್ಸೀಸ್
Published 26 ಜನವರಿ 2021, 9:56 IST
Last Updated 26 ಜನವರಿ 2021, 9:56 IST
ಜೋ ಬೈಡನ್‌
ಜೋ ಬೈಡನ್‌   

ಬಿಜೀಂಗ್‌: ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅಧಿಕಾರಕ್ಕೆ ಬಂದ ನಂತರವೂ ಅಮೆರಿಕ–ಚೀನಾದ ನಡುವಿನ ವಾಣಿಜ್ಯ ವಹಿವಾಟು ಸ್ಪರ್ಧೆ ಶಮನವಾಗುವಂತೆ ಕಾಣುತ್ತಿಲ್ಲ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

‘ಬೈಡನ್‌ ಅವರು ಕೊರೊನಾ ವೈರಸ್‌ ಮತ್ತು ಆರ್ಥಿಕತೆ ಬಿಕ್ಕಟ್ಟು ಶಮನಗೊಳಿಸುವಲ್ಲಿ ನಿರತರಾಗಿದ್ದಾರೆ. ಹಾಗಾಗಿ ಸದ್ಯಕ್ಕೆ ಬೈಡನ್‌ ಅವರು ವಾಣಿಜ್ಯ ವಹಿವಾಟು ಕುರಿತು ಚೀನಾದೊಂದಿಗೆ ಮಾತುಕತೆ ನಡೆಸುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಜೋ ಬೈಡನ್‌ ಅವರು ಚೀನಾದ ತಂತ್ರಜ್ಞಾನ ಮತ್ತು ವ್ಯಾಪಾರದಲ್ಲಿರುವ ಕುಂದು ಕೊರತೆ ಮೇಲೆ ಒತ್ತಡ ಹೇರುವ ಕುರಿತಾಗಿ ಚಿಂತನೆ ನಡೆಸುತ್ತಿದ್ದಾರೆ. 2017ರಲ್ಲಿ ಆಗಿನ ಅಧ್ಯಕ್ಷರಾಗಿದ್ದ ಡೊನಾಲ್ಡ್‌ ಟ್ರಂಪ್‌ ಅವರು ಕೂಡ ಚೀನಾದ ಸರಕುಗಳ ಆಮದಿನ ಮೇಲಿನ ಸುಂಕವನ್ನು ಹೆಚ್ಚಿಸಿದ್ದರು’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ಈಗ ಬೈಡನ್‌ ರಚನಾತ್ಮಕ ಸುಧಾರಣೆಗಳನ್ನು ಮಾಡಬಹುದು. ದೊಡ್ಡ ಪ್ರಮಾಣದಲ್ಲಿ ಬದಲಾವಣೆಗಳನ್ನು ತರಲು ಸ್ವಲ್ಪ ಸಮಯ ಬೇಕಾಗಬಹುದು’ ಎಂದು ಆಕ್ಸ್‌ಫರ್ಡ್‌ ಎಕನಾಮಿಕ್ಸ್‌ನ ಲೂಯಿಸ್‌ ಕುಜೂಸ್‌ ಅವರು ಹೇಳಿದರು.

‘ಬೈಡನ್‌ ಅವರು ಚೀನಾದ ವಸ್ತುಗಳ ಮೇಲಿನ ಸುಂಕ ಪ್ರಮಾಣವನ್ನು ಪರಿಶೀಲಿಸುತ್ತಿದ್ದಾರೆ’ ಎಂದು ಶ್ವೇತಭವನದ ವಕ್ತಾರೆ ಜೆನ್‌ ಸಾಕಿ ಅವರು ತಿಳಿಸಿದರು. ಆದರೆ, ಸಂಭವನೀಯ ಬದಲಾವಣೆ ಕುರಿತ ಯಾವುದೇ ಸುಳಿವನ್ನು ಅವರು ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.