ADVERTISEMENT

ಭಾರತದ ಕೊಡುಗೆ ಯುದ್ಧವಲ್ಲ, ಬುದ್ಧ: ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮೋದಿ

ಪಿಟಿಐ
Published 28 ಸೆಪ್ಟೆಂಬರ್ 2019, 2:30 IST
Last Updated 28 ಸೆಪ್ಟೆಂಬರ್ 2019, 2:30 IST
ಮೋದಿ
ಮೋದಿ   

ವಿಶ್ವಸಂಸ್ಥೆ: ಭಯೋತ್ಪಾದನೆಯು ಯಾವುದೋ ಒಂದು ದೇಶಕ್ಕೆ ಅಲ್ಲ, ಇಡೀ ಜಗತ್ತಿಗೆ ಅತಿ ದೊಡ್ಡ ಸವಾಲಾಗಿದೆ. ಹಾಗಾಗಿ ಅಂತರರಾಷ್ಟ್ರೀಯ ಸಮುದಾಯವು ಉಗ್ರವಾದದ ವಿರುದ್ಧ ಒಂದಾಗಿ ನಿಲ್ಲಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತವು ಜಗತ್ತಿಗೆ ಯುದ್ಧವನ್ನಲ್ಲ, ಬುದ್ಧನನ್ನು ನೀಡಿದ ದೇಶ. ಬುದ್ಧನ ಸಂದೇಶ ಶಾಂತಿ. ಆ ಕಾರಣಕ್ಕಾಗಿಯೇ ನಾವು ಭಯೋತ್ಪಾದನೆ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ ಈ ಅನಿಷ್ಟದ ಬಗ್ಗೆ ಜಗತ್ತನ್ನು ಎಚ್ಚರಿಸುತ್ತಿದ್ದೇವೆ. ಈ ಎಚ್ಚರಿಕೆಯು ಬಹಳ ಗಂಭೀರವಾಗಿದೆ ಮತ್ತು ಆಕ್ರೋಶದಿಂದ ಕೂಡಿದೆ ಎಂದು ಮೋದಿ ವಿವರಿಸಿದರು.

ಭಯೋತ್ಪಾದನೆಯು ವಿಶ್ವಸಂಸ್ಥೆ ಸ್ಥಾಪನೆಯ ನೆಲೆಗಟ್ಟನ್ನೇ ಶಿಥಿಲಗೊಳಿಸುತ್ತದೆ. ಹಾಗಿದ್ದರೂ ಎಲ್ಲ ಸದಸ್ಯ ರಾಷ್ಟ್ರಗಳು ಭಯೋತ್ಪಾದನೆಯ ವಿರುದ್ಧ ಒಟ್ಟಾಗದಿರುವುದು ವಿಷಾದನೀಯ ಎಂದುವಿಶ್ವಸಂಸ್ಥೆಯ 74ನೇ ಮಹಾಧಿವೇಶನದಲ್ಲಿ ಮಾತನಾಡಿದ ಮೋದಿ ಹೇಳಿದರು.

ADVERTISEMENT

ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ 2014ರಲ್ಲಿ ಮೋದಿ ಅವರು ಮಹಾಧಿವೇಶನದಲ್ಲಿ ಮೊದಲ ಬಾರಿ ಮಾತನಾಡಿದ್ದರು. ಈಗಿನದ್ದು ಅವರ ಎರಡನೇ ಭಾಷಣ. ಅವರು ಹಿಂದಿಯಲ್ಲಿ ಮಾತನಾಡಿದರು.

ಜಾಗತಿಕ ಶಾಂತಿಗಾಗಿ ಭಾರತದ ಕೊಡುಗೆಯನ್ನು ಮೋದಿ ಪ್ರಸ್ತಾಪಿಸಿದರು. ವಿಶ್ವಸಂಸ್ಥೆಯ ಶಾಂತಿ‍ಪಾಲನಾ ಪಡೆಗಳಲ್ಲಿ ಕೆಲಸ ಮಾಡುತ್ತಾ ಅತಿ ಹೆಚ್ಚು ಸಂಖ್ಯೆಯಲ್ಲಿ ಭಾರತದ ಯೋಧರು ಅಸುನೀಗಿದ್ದಾರೆ ಎಂದರು.

**

‘ಕಾಶ್ಮೀರದಲ್ಲಿ ಅಮಾನವೀಯ ಕರ್ಫ್ಯೂ’
ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಮಹಾಧಿವೇಶನದ ತಮ್ಮ ಮೊದಲ ಭಾಷಣದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾ‍ಪಿಸಿದ್ದಾರೆ. ಈ ಪ್ರದೇಶದ ಮೇಲೆ ಹೇರಿರುವ ‘ಅಮಾನವೀಯ ಕರ್ಫ್ಯೂ’ ತೆಗೆಯಬೇಕು ಮತ್ತು ಬಂಧನದಲ್ಲಿರುವವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಅಣ್ವಸ್ತ್ರ ಸಾಮರ್ಥ್ಯದ ಎರಡು ದೇಶಗಳ ನಡುವೆ ಸಂಘರ್ಷ ಏರ್ಪಟ್ಟರೆ ಅದರ ಪರಿಣಾಮ ಈ ದೇಶಗಳ ಗಡಿಗಳನ್ನು ಮೀರಿದ್ದಾಗಿರುತ್ತದೆ ಎಂದೂ ಅವರು ಎಚ್ಚರಿಸಿದರು.ಇಮ್ರಾನ್‌ಗೆ ಮೊದಲು ಇದೇ ವೇದಿಕೆಯಲ್ಲಿ ಮೋದಿ ಮಾತನಾಡಿದ್ದರು. ಮೋದಿ ಅವರು ಶಾಂತಿ ಪ್ರತಿಪಾದಿಸಿದರು. ಆದರೆ, ಇಮ್ರಾನ್‌ ಮಾತು ಅದಕ್ಕೆ ವ್ಯತಿರಿಕ್ತವಾಗಿತ್ತು.

*
ನಮ್ಮ ಉಪಕ್ರಮಗಳು ಕನಿಕರದ ಅಭಿವ್ಯಕ್ತಿಯೂ ಅಲ್ಲ, ನಾಟಕವೂ ಅಲ್ಲ. ಅವೆಲ್ಲವುಗಳಿಗೆ ಕರ್ತವ್ಯ ನಿರ್ವಹಣೆಯ ಭಾವವೇ ಸ್ಫೂರ್ತಿ ಮತ್ತು ಅದು ಮಾತ್ರ.
-ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.