
ವಿಶ್ವಸಂಸ್ಥೆ (ಪಿಟಿಐ): ಡಿಸೆಂಬರ್ 21 ಅನ್ನು ‘ವಿಶ್ವ ಧ್ಯಾನ ದಿನ’ವಾಗಿ ಆಚರಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಶುಕ್ರವಾರ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದೆ.
ಭಾರತದ ಮುಂದಾಳತ್ವದಲ್ಲಿ ಶ್ರೀಲಂಕಾ, ನೇಪಾಳ, ಮೆಕ್ಸಿಕೊ ಮತ್ತು ಅಂಡೋರಾ ಇದ್ದ ಸಮೂಹ ನಿರ್ಣಯ ಪ್ರಸ್ತಾಪಿಸಿದ್ದವು. ಎಲ್ಲ 193 ಸದಸ್ಯ ರಾಷ್ಟ್ರಗಳು ನಿರ್ಣಯವನ್ನು ಅನುಮೋದಿಸಿದವು.
‘ಸಮಗ್ರ ಯೋಗಕ್ಷೇಮ ಮತ್ತು ಆಂತರಿಕ ರೂಪಾಂತರಕ್ಕಾಗಿ ಒಂದು ದಿನ. ನಿರ್ಣಯ ಅಂಗೀಕರಿಸಲು ಭಾರತವಿದ್ದ ರಾಷ್ಟ್ರಗಳ ಸಮೂಹ ಕಾರಣವಾಗಿರುವುದು ಸಂತೋಷದ ಸಂಗತಿ‘ ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
‘ಇಡೀ ಮನುಕುಲದ ಕ್ಷೇಮಕ್ಕಾಗಿ ಭಾರತ ಮುಂದಾಳತ್ವ ವಹಿಸುವುದು ನಮ್ಮ ‘ವಸುಧೈವ ಕುಟುಂಬಕಂ’ನ ಚಿಂತನೆಯ ಮೂಲ ಧಾತುವಾಗಿದೆ’ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಅಂತರರಾಷ್ಟ್ರೀಯ ಯೋಗ ದಿನವನ್ನು ಜೂನ್ 21ರಂದು ಆಚರಿಸಲಾಗುತ್ತಿದೆ. ಸರಿಯಾಗಿ ಆರು ತಿಂಗಳ ಬಳಿಕ ‘ವಿಶ್ವ ಧ್ಯಾನ ದಿನ’ ನಿಗದಿಯಾಗಿದೆ. ಯೋಗ ದಿನ ಆಚರಣೆಗೂ ಭಾರತ ಮುಂದಾಳತ್ವ ವಹಿಸಿತ್ತು.
‘ನಿಯಮಿತವಾದ ಧ್ಯಾನದಿಂದ ಬದುಕಿನ ಒತ್ತಡವು ಕುಗ್ಗಲಿದೆ ಹಾಗೂ ದೈಹಿಕ ಚಟುವಟಿಕೆಗೆ ಉತ್ಸಾಹವನ್ನು ನೀಡಲಿದೆ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ’ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿಯು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.