ADVERTISEMENT

ಬ್ರಿಟನ್‌ನಲ್ಲಿ ಓಮೈಕ್ರಾನ್: ಏಪ್ರಿಲ್‌ ಅಂತ್ಯಕ್ಕೆ 75 ಸಾವಿರ ಜನರ ಸಾವು ಸಾಧ್ಯತೆ

ಏಜೆನ್ಸೀಸ್
Published 13 ಡಿಸೆಂಬರ್ 2021, 17:34 IST
Last Updated 13 ಡಿಸೆಂಬರ್ 2021, 17:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌: ಓಮೈಕ್ರಾನ್‌ ರೂಪಾಂತರ ತಳಿಯ ಸೋಂಕಿಗೆ ಒಳಗಾದವರ ಪೈಕಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಬ್ರಿಟನ್‌ ಪ್ರಧಾನ ಮಂತ್ರಿ ಬೋರಿಸ್‌ ಜಾನ್ಸನ್‌ ಸೋಮವಾರ ಹೇಳಿದ್ದಾರೆ.

ದೇಶದಲ್ಲಿ ಈಗಾಗಲೇ ಕೋವಿಡ್ ರೂಪಾಂತರ ತಳಿಯ ವಿರುದ್ಧ ಹೋರಾಡುವ ಬೂಸ್ಟರ್‌ ಡೋಸ್‌ ನೀಡುವ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಈ ಡೋಸ್ ಪಡೆಯಲು ಸೋಮವಾರ ಎಲ್ಲಾ ಲಸಿಕೆ ಕೇಂದ್ರಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಜಾನ್ಸನ್‌ ಅವರು, ‘ಓಮೈಕ್ರಾನ್‌ ಸೋಂಕಿನಿಂದ ಹಲವರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕನಿಷ್ಠ ಒಬ್ಬರು ಮೃತಪಟ್ಟಿದ್ದಾರೆ. ಇದು ವಿಷಾದನೀಯ. ಜನರು ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದರು.

ADVERTISEMENT

ಈ ರೂಪಾಂತರ ತಳಿಯು ಹೆಚ್ಚಿನ ಸಂಖ್ಯೆಯಲ್ಲಿ ಪ್ರಸರಣಗೊಂಡು ಅಬ್ಬರದ ಅಲೆಯಾಗುವ ಸಾಧ್ಯತೆ ಇದೆ ಎಂದುಭಾನುವಾರ ರಾತ್ರಿ ಜಾನ್ಸನ್‌ ಅವರು ಟೆಲಿವಿಷನ್‌ನಲ್ಲಿ ಮಾಡಿದ ಭಾಷಣದಲ್ಲಿ ಎಚ್ಚರಿಕೆ ನೀಡಿದ್ದರು.ಇಂಗ್ಲೆಂಡ್‌ನಲ್ಲಿ 10 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ರೂಪಾಂತರ ತಳಿ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿತ್ತು.

75 ಸಾವಿರ ಜನರ ಸಾವು ಸಾಧ್ಯತೆ
ಲಂಡನ್‌: ಕೊರೊನಾ ವೈರಸ್‌ನ ಓಮೈಕ್ರಾನ್‌ ತಳಿ ಸೋಂಕು ಪ್ರಸರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ, ಈ ತಳಿಯು ಬ್ರಿಟನ್‌ನಲ್ಲಿ ಮುಂದಿನ ವರ್ಷ ಏಪ್ರಿಲ್ ವೇಳೆಗೆ 75 ಸಾವಿರ ಜನರ ಸಾವಿಗೆ ಕಾರಣವಾಗಬಹುದು ಎಂದು ಅಧ್ಯಯನವೊಂದು ಹೇಳಿದೆ.

ಲಂಡನ್‌ ಸ್ಕೂಲ್‌ ಆಫ್‌ ಹೈಗಿನ್ ಆ್ಯಂಡ್ ಟ್ರಾಪಿಕಲ್ ಮೆಡಿಸಿನ್‌ನ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದಾರೆ. ಈ ವರ್ಷ ಜನವರಿಯಲ್ಲಿ ವರದಿಯಾಗಿದ್ದಕ್ಕಿಂತಲೂ ಹೆಚ್ಚು ಪ್ರಕರಣಗಳು ಕಂಡುಬರಬಹುದು ಹಾಗೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಅಧಿಕವಾಗಿರಲಿದೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.

ವ್ಯಕ್ತಿಯ ದೇಹದಲ್ಲಿನ ಪ್ರತಿಕಾಯಗಳಿಂದ ತಪ್ಪಿಸಿಕೊಳ್ಳುವ ಗುಣವನ್ನು ಓಮೈಕ್ರಾನ್ ಹೊಂದಿದೆ. ಎಂದು ಸಂಶೋಧಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.