ADVERTISEMENT

ಹಕ್ಕಿಜ್ವರದಿಂದ ಕುಕ್ಕುಟೋದ್ಯಮ ರಕ್ಷಣೆಗೆ ಲಸಿಕೆಗೆ ಅಮೆರಿಕ ಮೊರೆ?

ಈಗಾಗಲೆ ಹಕ್ಕಿಜ್ವರದಿಂದ 2.2 ಕೋಟಿ ಕೋಳಿಮರಿಗಳ ನಾಶ

ರಾಯಿಟರ್ಸ್
Published 4 ಏಪ್ರಿಲ್ 2022, 14:37 IST
Last Updated 4 ಏಪ್ರಿಲ್ 2022, 14:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಷಿಕಾಗೊ: ಅಮೆರಿಕದಲ್ಲಿ ಈ ವರ್ಷದ ಫೆಬ್ರುವರಿಯಿಂದ ವ್ಯಾಪಿಸಿರುವ ಹಕ್ಕಿಜ್ವರದಿಂದಾಗಿ 2.2 ಕೋಟಿಯಷ್ಟು ಕೋಳಿಮರಿಗಳು ನಾಶವಾಗಿದ್ದು, ಕುಕ್ಕುಟೋದ್ಯಮವನ್ನು ರಕ್ಷಿಸುವ ನಿಟ್ಟಿನಲ್ಲಿ ಕೋಳಿಗಳು ಮತ್ತು ಕೋಳಿಮರಿಗಳಿಗೆ ಲಸಿಕೆ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಕ್ಕಿಜ್ವರದಿಂದಾಗಿ 2015ರಿಂದಲೂ ಅಮೆರಿಕದ ಕುಕ್ಕುಟೋದ್ಯಮ ಭಾರಿ ಸಮಸ್ಯೆಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಹಕ್ಕಿಜ್ವರ ನಿಗ್ರಹಕ್ಕೆ ಲಸಿಕೆಯ ಮೊರೆ ಹೋಗುವ ಬಗ್ಗೆ ಅಮೆರಿಕ ಚಿಂತನೆ ನಡೆಸಿದೆ ಎನ್ನಲಾಗಿದೆ.

ಕುಕ್ಕುಟೋದ್ಯಮದ ಆರ್ಥಿಕ ನಷ್ಟ, ಕೋಳಿ ಸಾಕಾಣಿಕೆ ಉದ್ಯಮವನ್ನು ಜೀವಂತವಾಗಿಡಲು ಮತ್ತು ಆಹಾರ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಲಸಿಕೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ADVERTISEMENT

ಅಮೆರಿಕದ ಕೃಷಿ ಸಂಶೋಧನಾ ಸಂಸ್ಥೆ ಹಕ್ಕಿಜ್ವರ ನಿಯಂತ್ರಣದ ಲಸಿಕೆಗಾಗಿ ಸಂಶೋಧನೆ ನಡೆಸುತ್ತಿದೆ ಎಂದಿರುವ ಪಶು ವೈದ್ಯಕೀಯದ ಮುಖ್ಯ ಅಧಿಕಾರಿ ರೋಸ್‌ಮೇರಿ ಸೀಫರ್ಡ್,' ಲಸಿಕೆಯನ್ನು ಕಂಡುಹಿಡಿದರೆ ಉದ್ಯಮದ ಮೇಲಾಗುವ ಪರಿಣಾಮವನ್ನು ತಪ್ಪಿಸಬಹುದು. ಇಂಥ ಲಸಿಕೆ ಅಭಿವೃದ್ಧಿಗೆ ಕನಿಷ್ಠ 9 ತಿಂಗಳು ಬೇಕಾಗಲಿದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ' ಎಂದು ತಿಳಿಸಿದರು.

ಬೇರೆ ದೇಶಗಳು ತನ್ನಿಂದ ಕೋಳಿಗಳನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂಬ ಭೀತಿಗೆ ಒಳಗಾದ ಅಮೆರಿಕವು ಹಕ್ಕಿಜ್ವರಕ್ಕೆ ಲಸಿಕೆ ನೀಡುವುದಕ್ಕೆ ಈ ಹಿಂದೆ ತಿಲಾಂಜಲಿ ನೀಡಿತ್ತು.

2020ರಲ್ಲಿ 2ನೇ ಅತಿದೊಡ್ಡ ಕೋಳಿಮಾಂಸ ರಫ್ತು ದೇಶವಾಗಿದ್ದ ಅಮೆರಿಕ, ₹31 ಸಾವಿರ ಕೋಟಿ ಮೌಲ್ಯದ ಮೊಟ್ಟೆ ಉತ್ಪಾದನೆಯೊಂದಿಗೆ ಪ್ರಮುಖ ಮೊಟ್ಟೆ ಉತ್ಪಾದಕ ದೇಶವಾಗಿಯೂ ಹೊರಹೊಮ್ಮಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.