ADVERTISEMENT

ಆಗಸ್ಟ್ 27ರಿಂದ ಭಾರತದ ಸರಕುಗಳ ಮೇಲೆ ಶೇ50 ಸುಂಕ:ಅಮೆರಿಕದಿಂದ ಕರಡು ಆದೇಶ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 5:52 IST
Last Updated 26 ಆಗಸ್ಟ್ 2025, 5:52 IST
   

ವಾಷಿಂಗ್ಟನ್: ಆಗಸ್ಟ್ 27ರಿಂದ ಜಾರಿಗೆ ಬರುವಂತೆ ಭಾರತೀಯ ಉತ್ಪನ್ನಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದ ಹೆಚ್ಚುವರಿ ಶೇ 25 ರಷ್ಟು ಸುಂಕವನ್ನು ಜಾರಿಗೆ ತರುವ ಯೋಜನೆಗಳನ್ನು ವಿವರಿಸುವ ಕರಡು ಆದೇಶವನ್ನು ಅಮೆರಿಕ ಹೊರಡಿಸಿದೆ.

ಆಗಸ್ಟ್‌ 27ರ ಮಧ್ಯರಾತ್ರಿ 12.01ರಿಂದ ಈ ಹೊಸ ಸುಂಕ ಜಾರಿಗೆ ಬರಲಿದೆ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟೀಸ್ ಆದೇಶದಲ್ಲಿ ತಿಳಿಸಿದೆ.

ಭಾರತವು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುತ್ತಿರುವುದರಿಂದ ದಂಡದ ಮಾದರಿಯಲ್ಲಿ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ 50ಕ್ಕೆ ದ್ವಿಗುಣಗೊಳಿಸುವುದಾಗಿ ಆಗಸ್ಟ್ 7ರಂದು ಟ್ರಂಪ್ ಘೋಷಿಸಿದ್ದರು. ಆದರೆ, ಒಪ್ಪಂದದ ಕುರಿತಂತೆ ಮಾತುಕತೆ ನಡೆಸಲು 21 ದಿನಗಳ ಕಾಲಾವಕಾಶ ನೀಡಿದ್ದರು.

ADVERTISEMENT

ಜುಲೈ ಅಂತ್ಯದಲ್ಲಿ ಘೋಷಿಸಲಾದ ಶೇ 25ರಷ್ಟು ಸುಂಕ ಮತ್ತು ಆಗಸ್ಟ್ 7 ರಂದು ಘೋಷಿಸಿದ ಶೇ 25ರಷ್ಟು ಸುಂಕ ಸೇರಿ ಭಾರತದ ಸರಕುಗಳ ಮೇಲೆ ಶೇ 50ರಷ್ಟು ಸುಂಕ ಹೇರಿಕೆಗೆ ಅಮೆರಿಕ ಮುಂದಾಗಿದೆ.

ಆಗಸ್ಟ್ 27ರಂದು ಮಧ್ಯರಾತ್ರಿ12:01ಕ್ಕಿಂತ ಮೊದಲು ಹಡಗಿಗೆ ಲೋಡ್ ಮಾಡಿ ಅಮೆರಿಕಕ್ಕೆ ಸಾಗಿಸಿದ್ದರೆ, ಸೆಪ್ಟೆಂಬರ್ 17ಕ್ಕಿಂತ ಮೊದಲು ದೇಶದಲ್ಲಿ ಬಳಸಲು ಅನುಮತಿ ಪಡೆದಿದ್ದರೆ ಅಂತಹ ಉತ್ಪನ್ನಗಳಿಗೆ ಶೇ 50ರ ಸುಂಕ ವಿನಾಯಿತಿ ಸಿಗಲಿದೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷವನ್ನು ಕೊನೆಗೊಳಿಸಲು ಅಧ್ಯಕ್ಷ ಟ್ರಂಪ್ ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಈ ತಿಂಗಳ ಆರಂಭದಲ್ಲಿ ಹೇಳಿದ್ದರು.

ರಷ್ಯಾದ ತೈಲವನ್ನು ಮರುಮಾರಾಟ ಮಾಡುವ ಮೂಲಕ ಭಾರತ ಲಾಭ ಗಳಿಸುತ್ತಿದೆ ಎಂದು ಅಮೆರಿಕದ ಗೃಹ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಆರೋಪಿಸಿದ್ದಾರೆ.

ಭಾರತವು ಅಮೆರಿಕ ವಿಧಿಸಿರುವ ಸುಂಕಗಳನ್ನು ನ್ಯಾಯಸಮ್ಮತವಲ್ಲದ ಮತ್ತು ಅಸಮಂಜಸ ಎಂದು ಕರೆದಿದೆ.

ಯಾವುದೇ ಪ್ರಮುಖ ಆರ್ಥಿಕತೆಯಂತೆ, ತನ್ನ ರಾಷ್ಟ್ರೀಯ ಹಿತಾಸಕ್ತಿ ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭಾರತ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.