ಟ್ರಂಪ್
ಬೆಂಗಳೂರು: ‘ಭಾರತ, ಚೀನಾದಂತಹ ದೇಶಗಳಿಂದ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಿ, ಅಮೆರಿಕನ್ನರಿಗೆ ಬೆಲೆ ಕೊಡಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ದೇಶದ ಗೂಗಲ್, ಮೈಕ್ರೊಸಾಫ್ಟ್‌ನಂತಹ ಟೆಕ್ ದೈತ್ಯ ಕಂಪನಿಗಳಿಗೆ ತಾಕೀತು ಮಾಡಿದ್ದಾರೆ.
ವಾಷಿಂಗ್ಟನ್‌ನಲ್ಲಿ ಜರುಗಿದ ಅಮೆರಿಕ ಎಐ ಟೆಕ್ ಸಮ್ಮಿಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಅಮೆರಿಕದ ನಾಗರಿಕರಿಗೆ ಉದ್ಯೋಗಗಳನ್ನು ಕೊಡುವುದರತ್ತ ಕಂಪನಿಗಳು ಗಮನಹರಿಸಬೇಕು, ಭಾರತ, ಚೀನಾದವರನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಿದರೆ ಒಳ್ಳೆಯದು’ ಎಂದು ಹೇಳಿದ್ದಾರೆ.
‘ನಿಮ್ಮ ಜಾಗತಿಕವಾದಿ ಮನಸ್ಥಿತಿ ಅಮೆರಿಕನ್ನರನ್ನು ಹಿಂದೆ ತಳ್ಳಿದೆ. ಅಮೆರಿಕ ನೀಡಿರುವ ಸ್ವಾತಂತ್ರ್ಯ ಬಳಸಿಕೊಂಡು ಸಾಕಷ್ಟು ಲಾಭ ಮಾಡಿದ್ದೀರಾ. ಆದರೆ, ಬಂದ ಲಾಭವನ್ನು ಹೊರ ದೇಶಗಳಲ್ಲಿ ಹೂಡಿಕೆ ಮಾಡಿದ್ದೀರಿ‘ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಚೀನಾದಲ್ಲಿ ಕಂಪನಿ ಘಟಕಗಳನ್ನು ತೆರೆಯುತ್ತಿರಾ, ಭಾರತದ ಪ್ರತಿಭಾವಂತರನ್ನು ನೇಮಿಸಿಕೊಳ್ಳುತ್ತಿರಾ, ಐರ್ಲೆಂಡ್‌ನಲ್ಲಿ ಹಣ ಇಡುತ್ತಿರಾ‘ ಎಂದು ವ್ಯಂಗ್ಯವಾಡಿದ್ದಾರೆ
‘ನನ್ನ ಆಡಳಿತದಲ್ಲಿ ಇನ್ಮುಂದೆ ಅಂತಹದ್ದೆಲ್ಲಾ ನಡೆಯುವುದಿಲ್ಲ’ ಎಂದೂ ಟ್ರಂಪ್ ಗುಡುಗಿದ್ದಾರೆ. ‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಜೊತೆ ದೇಶ ನಿಷ್ಠೆ ಹಾಗೂ ರಾಷ್ಟ್ರೀಯತೆಯೂ ಬೇಕಾಗುತ್ತದೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ’ ಎಂದು ತನ್ನ ದೇಶದ ದೊಡ್ಡ ದೊಡ್ಡ ಟೆಕ್ ಕಂಪನಿಗಳಿಗೆ ಸಲಹೆ ನೀಡಿದ್ದಾರೆ. ಈ ಕುರಿತು ಇಂಡಿಯಾ ಟುಡೇ ವೆಬ್‌ಸೈಟ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.