ADVERTISEMENT

ಭಾರತೀಯ ನೌಕಾಪಡೆಗೆ ಬರಲಿವೆ ದಿಗಿಲು ಹುಟ್ಟಿಸುವ ಸೀಹಾಕ್ ಹೆಲಿಕಾಪ್ಟರ್‌ಗಳು

ಖರೀದಿ ಒಪ್ಪಂದಕ್ಕೆ ಅಮೆರಿಕ ಸಮ್ಮತಿ

ಏಜೆನ್ಸೀಸ್
Published 3 ಏಪ್ರಿಲ್ 2019, 3:28 IST
Last Updated 3 ಏಪ್ರಿಲ್ 2019, 3:28 IST
   

ವಾಷಿಂಗ್ಟನ್: ಜಲಾಂತರ್ಗಾಮಿ ನೌಕೆಗಳಿಗೆ ದಿಗಿಲು ಹುಟ್ಟಿಸುವ ಸಾಮರ್ಥ್ಯದ 24 ಸೀಹಾಕ್ ಹೆಲಿಕಾಪ್ಟರ್‌ಗಳು ಶೀಘ್ರದಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿವೆ. ದಶಕದಿಂದ ಇದ್ದ ಭಾರತದ ಬೇಡಿಕೆಗೆ ಕೊನೆಗೂ ಅಮೆರಿಕ ಒಪ್ಪಿಗೆ ಸೂಚಿಸಿದೆ.

ಎಂಎಚ್–60 ರೋಮಿಯೊ ಸೀಹಾಕ್ ಕಾಪ್ಟರ್‌ಗಳನ್ನು ತುರ್ತಾಗಿ ಪೂರೈಸುವಂತೆ ಕೇಂದ್ರ ಸರ್ಕಾರವು ಅಮೆರಿಕಕ್ಕೆ ಮನವಿ ಮಾಡಿತ್ತು. ಅಮೆರಿಕ ಸಂಸತ್ತು ಈ ಖರೀದಿ ಒಪ್ಪಂದಕ್ಕೆಮಂಗಳವಾರ ಸಮ್ಮತಿ ನೀಡಿದೆ.

ಇತ್ತೀಚೆಗೆ ನಡೆದಿದ್ದ ಜಿ–20 ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್‌ ಟ್ರಂಪ್‌ ಈ ಒಪ್ಪಂದ ಕುರಿತು ಮಾತುಕತೆ ನಡೆಸಿದ್ದರು. ಅಂದಾಜು ₹16.5 ಸಾವಿರ ಕೋಟಿಗೆ (USD 2.4 billion) ಈ ಹೆಲಿಕಾಪ್ಟರ್‌ಗಳನ್ನು ಖರೀದಿಸಲಾಗುತ್ತಿದೆ.

ADVERTISEMENT

ಇತ್ತೀಚಿನ ದಿನಗಳಲ್ಲಿ ಭಾರತ–ಅಮೆರಿಕದ ನಡುವೆ ರಕ್ಷಣಾ ಖರೀದಿ ವ್ಯವಹಾರ ಹೆಚ್ಚಾಗಿದ್ದು, ಅಮೆರಿಕವು ತನ್ನ ಅತ್ಯಾಧುನಿಕ ಶಸ್ತ್ರಾಸ್ತ್ರ ತಂತ್ರಜ್ಞಾನವನ್ನು ಭಾರತದ ಜೊತೆ ಹಂಚಿಕೊಳ್ಳುತ್ತಿದೆ.

‘ಸೀಹಾಕ್’ ವಿಶೇಷತೆ ಏನು?

ಕಡಲಭದ್ರತೆಗೆ ಹೇಳಿಮಾಡಿಸಿದ ಜಗತ್ತಿನ ಅತ್ಯಾಧುನಿಕ ಹೆಲಿಕಾಪ್ಟರ್‌ ಎಂದು ಸೀಹಾಕ್‌ ಪರಿಗಣಿತವಾಗಿದೆ.ಅಮೆರಿಕದ ನೌಕಾಪಡೆಗೆ ಬಲ ತುಂಬಿರುವ ಸೀಹಾಕ್ ಹೆಲಿಕಾಪ್ಟರ್‌ಗಳನ್ನು ವಿಮಾನ ವಾಹಕಗಳು, ಯುದ್ಧನೌಕೆಗಳು, ವಿಧ್ವಂಸಕ ನೌಕೆಗಳು ಹಾಗೂ ಕ್ರೂಸರ್‌ಗಳಲ್ಲಿ ಬಳಸಬಹುದು.

ಹಿಂದೂ ಮಹಾಸಾಗರದಲ್ಲಿ ಬೆದರಿಕೆ ಒಡ್ಡುತ್ತಿರುವ ಚೀನಾಕ್ಕೆ ತಿರುಗೇಟು ನೀಡಲು ಸೀಹಾಕ್‌ ಹೆಲಿಕಾಪ್ಟರ್ ಅತ್ಯಂತ ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇವು ಭಾರತೀಯ ನೌಕಾಪಡೆಗೆ ಅಸೀಮ ಬಲ ತುಂಬಲಿವೆ ಎನ್ನಲಾಗಿದೆ.

ಹತ್ತು ಹಲವು ಸಾಮರ್ಥ್ಯಗಳನ್ನು ಇದು ಹೊಂದಿದೆ. ಜಲಾಂತರ್ಗಾಮಿಗಳ ಮೇಲೆ ಯುದ್ಧ, ಸರ್ವೇಕ್ಷಣೆ, ಸಂವಹನ, ಶೋಧ ಮತ್ತು ರಕ್ಷಣಾ ಕಾರ್ಯ, ಸರಕು ಸಾಗಾಟಕ್ಕೆ ಇದು ಹೆಸರುವಾಸಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.