ADVERTISEMENT

ಅಫ್ಗಾನಿಸ್ತಾನದಲ್ಲಿ ವೈಮಾನಿಕ ದಾಳಿ: ಅಮೆರಿಕ ಸ್ಪಷ್ಟನೆ

ಪಿಟಿಐ
Published 23 ಜುಲೈ 2021, 6:05 IST
Last Updated 23 ಜುಲೈ 2021, 6:05 IST
ವೈಮಾನಿಕ ದಾಳಿ– ಪ್ರಾತಿನಿಧಿಕ ಚಿತ್ರ
ವೈಮಾನಿಕ ದಾಳಿ– ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ತಾಲಿಬಾನ್ ದಂಗೆಕೋರರ ವಿರುದ್ಧ ಹೋರಾಡುತ್ತಿರುವ ಅಫ್ಗಾನಿಸ್ತಾನದ ಭದ್ರತಾ ಪಡೆಗಳನ್ನು ಬೆಂಬಲಿಸುವ ಪ್ರಯತ್ನದ ಭಾಗವಾಗಿ, ಕಳೆದ ಹಲವು ದಿನಗಳಿಂದ ಅಫ್ಗಾನಿಸ್ತಾನದಾದ್ಯಂತ ಅಮೆರಿಕದ ವಾಯುಪಡೆಗಳು ವೈಮಾನಿಕ ದಾಳಿ ನಡೆಸುತ್ತಿವೆ ಎಂದು ಅಮೆರಿಕ ಸರ್ಕಾರದ ಮಾಧ್ಯಮ ಕಾರ್ಯದರ್ಶಿ ಜಾನ್‌ ಕಿರ್ಬಿ ತಿಳಿಸಿದರು.

ವೈಮಾನಿಕ ದಾಳಿಗಳು ನಡೆದಿರುವ ಕುರಿತು ಮಾಹಿತಿ ನೀಡಿದ ಪೆಂಟಗನ್, ಅಫ್ಗಾನಿಸ್ತಾನದ ಯಾವ ನಿರ್ದಿಷ್ಟ ಸ್ಥಳಗಳಲ್ಲಿ ದಾಳಿ ನಡೆದಿದೆ ಎಂಬುದರ ಬಗ್ಗೆ ವಿವರಣೆ ನೀಡಲಿಲ್ಲ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾನ್‌, ‘ನಿಗದಿತ ಸ್ಥಳಗಳ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ. ಆದರೆ, ಕಳೆದ ಹಲವು ದಿನಗಳಿಂದ ವೈಮಾನಿಕ ದಾಳಿ ನಡೆಸುವ ಮೂಲಕ ತಾಲಿಬಾನಿ ದಂಗೆಕೋರರ ವಿರುದ್ಧ, ಅಫ್ಗನ್‌ ರಾಷ್ಟ್ರೀಯ ರಕ್ಷಣಾ ಪಡೆಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡುತ್ತಿರುವುದನ್ನು ನಾನು ಖಚಿತಪಡಿಸುತ್ತೇನೆ. ಆದರೆ ದಾಳಿಯ ಯುದ್ಧತಂತ್ರದ ವಿವರಗಳ ಬಗ್ಗೆ ನನ್ನಲ್ಲಿ ಮಾಹಿತಿ ಇಲ್ಲ‘ ಎಂದು ತಿಳಿಸಿದ್ದಾರೆ.

ADVERTISEMENT

‘ನಾವು ವೈಮಾನಿಕ ದಾಳಿಯನ್ನು ಮುಂದುವರಿಸುತ್ತೇವೆ. ಅಫ್ಗನ್‌ ಸೇನೆಗೆ ಬೆಂಬಲವಾಗಿ ನಿಲ್ಲುತ್ತೇವೆ' ಎಂದೂ ಅವರು ಭರವಸೆ ನೀಡಿದ್ದಾರೆ.

ಅಫ್ಗಾನಿಸ್ತಾನದ 400ಕ್ಕೂ ಹೆಚ್ಚು ಜಿಲ್ಲಾ ಕೇಂದ್ರಗಳನ್ನು ತಾಲಿಬಾನ್‌ ಪಡೆಗಳು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ದಾಳಿಯ ಕಾರ್ಯತಂತ್ರವನ್ನು ತ್ವರಿತಗೊಳಿಸಿವೆ ಎಂದು ಅಮೆರಿಕದ ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ಒಪ್ಪಿಕೊಂಡ ಒಂದು ದಿನದ ನಂತರ ಪೆಂಟಗನ್ ಈ ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.