ಅಮೆರಿಕ ಧ್ವಜ ( ಸಾಂದರ್ಭಿಕ ಚಿತ್ರ )
ವಾಷಿಂಗ್ಟನ್: ಗಾಜಾದ ದಕ್ಷಿಣ ಭಾಗದ ರಫಾ ನಗರವನ್ನು ಗುರಿಯಾಗಿಸಿ ಇಸ್ರೇಲ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಗರಿಕರು ಮೃತಪಟ್ಟಿರುವ ಘಟನೆಯನ್ನು ಅಮೆರಿಕದ ಶ್ವೇತ ಭವನ ಖಂಡಿಸಿದೆ. ಆದರೆ, ಇಸ್ರೇಲ್ ಜೊತೆಗಿನ ತಮ್ಮ ಸಂಬಂಧದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಭದ್ರತಾ ಕೌನ್ಸಿಲ್‌ನ ವಕ್ತಾರ ಜಾನ್ ಕಿರ್ಬಿ, ‘ಬೈಡನ್ ಹಾಕಿದ ಕೆಂಪು ಗೆರೆಯನ್ನು ಇಸ್ರೇಲ್ ದಾಟಿಲ್ಲ. ರಫಾ ನಗರದಲ್ಲಿ ಇಸ್ರೇಲ್ ಪೂರ್ಣ ಪ್ರಮಾಣದ ದಾಳಿ ನಡೆಸುವುದಿಲ್ಲ ಎಂಬಂತೆ ಅಮೆರಿಕಕ್ಕೆ ಕಂಡುಬರುತ್ತಿದೆ. ರಫಾದಲ್ಲಿರುವ ಜನನಿಬಿಡ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ಮಾಡಿಲ್ಲ’ ಎಂದು ತಿಳಿಸಿದ್ದಾರೆ.
‘ಜನರು ಮೃತಪಟ್ಟಿರುವುದು ಹೃದಯವಿದ್ರಾವಕ, ಭೀಕರ. ಈ ದಾಳಿಯ ಕುರಿತು ಇಸ್ರೇಲ್ ನಡೆಸುತ್ತಿರುವ ತನಿಖೆಯ ಫಲಿತಾಂಶಗಳ ಮೇಲೆ ಅಮೆರಿಕ ನಿಗಾ ವಹಿಸಿದೆ. ಈ ದಾಳಿಯಲ್ಲಿ ಹಮಾಸ್‌ನ ಇಬ್ಬರು ಹಿರಿಯ ಮುಖ್ಯಸ್ಥರು ಹತರಾಗಿದ್ದಾರೆ ಎಂಬುದು ನಮಗೆ ಅರ್ಥವಾಗಿದೆ. ಮುಗ್ಧ ಜನರ ರಕ್ಷಣೆಗಾಗಿ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಇಸ್ರೇಲ್‌ಗೆ ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.