(ಸಾಂದರ್ಭಿಕ ಚಿತ್ರ)
ನ್ಯೂಯಾರ್ಕ್/ ವಾಷಿಂಗ್ಟನ್: ಪಹಲ್ಗಾಮ್ ದಾಳಿಯ ಹೊಣೆ ಹೊತ್ತುಕೊಂಡಿದ್ದ ಪಾಕಿಸ್ತಾನ ಮೂಲದ ಉಗ್ರರ ಗುಂಪು ‘ದಿ ರೆಸಿಸ್ಟೆನ್ಸ್ ಫ್ರಂಟ್’ಅನ್ನು (ಟಿಆರ್‌ಎಫ್) ‘ವಿದೇಶಿ ಭಯೋತ್ಪಾದಕ ಸಂಘಟನೆ’ ಎಂದು ಅಮೆರಿಕ ಘೋಷಿಸಿದೆ.
‘ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ನ್ಯಾಯ ಒದಗಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ಅಮೆರಿಕ ಹೊಂದಿರುವ ಬದ್ಧತೆಯನ್ನು ಇದು ತೋರಿಸುತ್ತದೆ’ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಗುರುವಾರ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಏಪ್ರಿಲ್ 22ರಂದು ಉಗ್ರರು ನಡೆಸಿದ್ದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು.
ನಿಷೇಧಿತ ಲಷ್ಕರ್–ಎ–ತಯಬಾದ (ಎಲ್‌ಇಟಿ) ಅಧೀನ ಸಂಘಟನೆಯಾಗಿರುವ ಟಿಆರ್‌ಎಫ್, ಪಹಲ್ಗಾಮ್ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಆದರೆ, ಭಾರತ– ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ಹೆಚ್ಚಿದಂತೆ ತನ್ನ ಹೇಳಿಕೆ ವಾಪಸ್ ಪಡೆದುಕೊಂಡಿತ್ತು.
‘ಅಮೆರಿಕದ ವಿದೇಶಾಂಗ ಇಲಾಖೆಯು ಟಿಆರ್‌ಎಫ್‌ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ (ಎಫ್‌ಟಿಒ) ಮತ್ತು ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ (ಎಸ್‌ಡಿಜಿಟಿ) ಸಂಘಟನೆಯಾಗಿ ಹೆಸರಿಸುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.
ಟಿಆರ್‌ಎಫ್ ವಿರುದ್ಧದ ಈ ಕ್ರಮವು ‘ರಾಷ್ಟ್ರೀಯ ಭದ್ರತಾ ಹಿತಾಸಕ್ತಿ ಕಾಪಾಡುವಲ್ಲಿ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಟ್ರಂಪ್ ಆಡಳಿತದ ಬದ್ಧತೆಯನ್ನು ತೋರಿಸುತ್ತದೆ’ ಎಂದು ರುಬಿಯೊ ಹೇಳಿದ್ದಾರೆ.
‘ಪಹಲ್ಗಾಮ್ ದಾಳಿಯು ಎಲ್ಇಟಿ ನಡೆಸಿದ 2008ರ ಮುಂಬೈ ದಾಳಿಯ ನಂತರ ಭಾರತದಲ್ಲಿ ನಾಗರಿಕರನ್ನು ಗುರಿಯಾಗಿಸಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಭಾರತದ ಭದ್ರತಾ ಪಡೆಗಳನ್ನು ಗುರಿಯಾಗಿಸಿ ನಡೆದ ಹಲವಾರು ದಾಳಿಗಳ ಹೊಣೆಯನ್ನೂ ಟಿಆರ್‌ಎಫ್ ವಹಿಸಿಕೊಂಡಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.