
ಫಿಲಾಡೆಲ್ಫಿಯಾ: ತಮ್ಮದಲ್ಲದ ತಪ್ಪಿಗೆ ಅಮೆರಿಕದ ಜೈಲಿನಲ್ಲಿ ನಿರಂತರ 43 ವರ್ಷ ಶಿಕ್ಷೆ ಅನುಭವಿಸಿದ ಭಾರತೀಯ ಸಂಜಾತ ಸುಬ್ರಹ್ಮಣ್ಯಂ ವೇದಂ (64), ಕೊನೆಗೂ ಈ ಮಾಸಾಂತ್ಯದಲ್ಲಿ ಬಿಡುಗಡೆಯಾಗುತ್ತಿದ್ದಾರೆ. ಆದರೆ, ಅವರ ಮೇಲಿನ ಆರೋಪ ಸಾಬೀತಾಗದಿದ್ದರೂ ಅವರನ್ನು ಗಡಿಪಾರು ಮಾಡಲು ಅಲ್ಲಿನ ವಲಸೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ವೇದಂ 9 ತಿಂಗಳ ಮಗುವಾಗಿದ್ದಾಗ ತಂದೆ–ತಾಯಿಯೊಂದಿಗೆ ಕಾನೂನುಬದ್ಧವಾಗಿ ಅಮೆರಿಕ ಪ್ರವೇಶಿಸಿದ್ದರು. 1980ರಲ್ಲಿ ನಡೆದಿದ್ದ ಸ್ನೇಹಿತನ ಕೊಲೆ ಪ್ರಕರಣವೊಂದರಲ್ಲಿ ವೇದಂ ಹೆಸರನ್ನೂ ಪೊಲೀಸರು ಆರೋಪ ಪಟ್ಟಿಯಲ್ಲಿ ಸೇರಿಸಿದ್ದರು. ತಾವು ನಿರ್ದೋಷಿ ಎನ್ನುವುದನ್ನು ಸಾಬೀತುಪಡಿಸಲು ಅವರು ನಾಲ್ಕು ದಶಕ ಹೋರಾಡಬೇಕಾಗಿ ಬಂತು. ಇದೀಗ ಅವರನ್ನು ಪೆನ್ಸಿಲ್ವೇನಿಯಾ ಜೈಲಿನಿಂದ ಬಿಡುಗಡೆ ಮಾಡಲಾಗುತ್ತಿದೆ. ಆದರೆ, ಕೊಲೆ ಪ್ರಕರಣದಲ್ಲಿ ಅವರ ಹೆಸರು ಇರುವುದರಿಂದ ಅವರನ್ನು ಗಡಿಪಾರು ಮಾಡಬೇಕಾಗುತ್ತದೆ ಎಂದು ವಲಸೆ ಅಧಿಕಾರಿಗಳು ಹೇಳುತ್ತಿದ್ದಾರೆ.
‘ತಮ್ಮದಲ್ಲದ ತಪ್ಪಿಗೆ ವೇದಂ ಶಿಕ್ಷೆ ಅನುಭವಿಸಿದ್ದಾರೆ. ಅವರಿಗೆ ಭಾರಿ ಅನ್ಯಾಯವಾಗಿದೆ’ ಎಂದು ವಲಸೆ ವಕೀಲ ಏವ್ ಬೆನಾಚ್ ಹೇಳಿದ್ದಾರೆ. ‘ವಲಸೆ ನ್ಯಾಯಾಧೀಶರು ಅವರ ಗಡಿಪಾರು ಶಿಕ್ಷೆ ರದ್ದುಪಡಿಸಬಹುದು’ ಎಂದು ಅವರ ಪರ ವಕೀಲರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇದು ತೀರ್ಮಾನ ಆಗುವವರೆಗೆ ವೇದಂ ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಅಧಿಕಾರಿಗಳ ನಿಗಾದಲ್ಲಿ ಪೆನ್ಸಿಲ್ವೇನಿಯಾ ಜೈಲಿನಲ್ಲೇ ಇರಬೇಕಿದೆ.
ವೇದಂ ಅವರನ್ನು ಗಡಿಪಾರು ಮಾಡುವುದಕ್ಕೆ ಆಕ್ಷೇಪಿಸಿದ್ದ ಅವರ ಸಹೋದರಿ ಸರಸ್ವತಿ ವೇದಂ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಜೈಲಿನಲ್ಲಿದ್ದಕೊಂಡೇ ಶಿಕ್ಷಣ ಮುಂದುವರಿಸಿದ್ದ ವೇದಂ ಹಲವು ಪದವಿಗಳನ್ನು ಗಳಿಸಿದ್ದಾರೆ.
ಏನಿದು ಪ್ರಕರಣ:
19 ವರ್ಷ ವಯಸ್ಸಿನ ಸುಬ್ರಹ್ಮಣ್ಯಂ ವೇದಂ ಮತ್ತು ಥಾಮಸ್ ಕಿನ್ಸರ್ ಪೆನ್ಸಿಲ್ವೇನಿಯಾ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಸಹಪಾಠಿಗಳಾಗಿದ್ದರು. ಕಿನ್ಸರ್ ಕೊಲೆ ಬೆನ್ನಲ್ಲೇ ವೇದಂ ಹೆಸರು ಕೇಳಿಬಂದಿತ್ತು. ಕೊನೆಯ ಬಾರಿ ಕಿನ್ಸರ್ ಅವರೊಂದಿಗೆ ಕಾಣಿಸಿಕೊಂಡಿದ್ದು ವೇದಂ ಎಂದು ಪೊಲೀಸರು ಅವರನ್ನು ಬಂಧಿಸಿದ್ದರು.
ಆಗಸ್ಟ್ ತಿಂಗಳಲ್ಲಿ ವೇದಂ ಪರ ವಕೀಲರು, ಪ್ರಾಸಿಕ್ಯೂಟರ್‌ಗಳು ಎಂದೂ ಬಹಿರಂಗಪಡಿಸದ ಸಾಕ್ಷ್ಯವೊಂದನ್ನು ಕೋರ್ಟ್ ಗಮನಕ್ಕೆ ತಂದರು. ಇದನ್ನು ಪರಿಶೀಲಿಸಿದ ನ್ಯಾಯಾಧೀಶರು ವೇದಂ ಶಿಕ್ಷೆಯನ್ನು ರದ್ದುಗೊಳಿಸುವ ತೀರ್ಮಾನ ಪ್ರಕಟಿಸಿದರು. ಆದರೆ, ಅವರು ಈಗ ಅಮೆರಿಕದಿಂದ ಭಾರತಕ್ಕೆ ಮರಳಬೇಕಾದರೆ ಮತ್ತೊಂದು ಸುತ್ತಿನ ಕಾನೂನು ಹೋರಾಟ ನಡೆಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.