ಪ್ರಾತಿನಿಧಿಕ ಚಿತ್ರ
ಲಂಡನ್: ‘ಏಡ್ಸ್’ ನಿಯಂತ್ರಣ ಕಾರ್ಯಕ್ರಮಕ್ಕೆ ಅಮೆರಿಕ ಹಠಾತ್ತನೆ ಹಣಕಾಸು ನೆರವು ಸ್ಥಗಿತಗೊಳಿಸಿರುವುದರಿಂದ ಏಡ್ಸ್ ರೋಗಿಗಳಿಗೆ ಸಂಕಷ್ಟ ಎದುರಾಗಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಆರು ತಿಂಗಳಿಂದ ಆರ್ಥಿಕ ನೆರವನ್ನು ಅಮೆರಿಕ ಹಿಂಪಡೆದಿದೆ. ಇದು ವ್ಯವಸ್ಥಿತ ಆಘಾತಕ್ಕೆ ಕಾರಣವಾಗಿದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಆರ್ಥಿಕ ನೆರವನ್ನು ಅಮೆರಿಕ ಮುಂದುವರಿಸದಿದ್ದರೆ 2029ರ ವೇಳೆಗೆ 40 ಲಕ್ಷಕ್ಕೂ ಹೆಚ್ಚು ಜನರು ಏಡ್ಸ್ ಸಂಬಂಧಿತ ರೋಗಗಳಿಗೆ ಬಲಿಯಾಗಲಿದ್ದಾರೆ. ಅಲ್ಲದೆ 60 ಲಕ್ಷಕ್ಕೂ ಹೆಚ್ಚು ಜನರು ಎಚ್‌ಐವಿ ಸೋಂಕಿಗೆ ತುತ್ತಾಗುವ ಸಾಧ್ಯತೆಗಳಿವೆ ಎಂದು ಅವರು ಅಂಕಿ ಅಂಶ ನೀಡಿದ್ದಾರೆ.
ಹಲವು ವರ್ಷಗಳಿಂದ ಅಮೆರಿಕ ನೀಡುತ್ತಿದ್ದ ನೆರವಿನಿಂದ ಈ ಕಾಯಿಲೆಯಿಂದ ಮೃತಪಡುವವರ ಸಂಖ್ಯೆ ಗಣನೀಯವಾಗಿ ತಗ್ಗಿತ್ತು. ವಿಶ್ವದಾದ್ಯಂತ ಅತ್ಯಂತ ದುರ್ಬಲರ ಜೀವ ಉಳಿಸಲು ಇದು ನೆರವಾಗಿತ್ತು ಎಂದು ಅವರು ಹೇಳಿದ್ದಾರೆ.
‘ಆರ್ಥಿಕ ಕೊರತೆಯ ಕಾರಣ ಹಲವು ಆರೋಗ್ಯ ಸೌಲಭ್ಯಗಳನ್ನು ಮುಚ್ಚಲಾಗುತ್ತಿದೆ. ಸಾವಿರಾರು ಆರೋಗ್ಯ ಚಿಕಿತ್ಸಾಲಯಗಳಲ್ಲಿ ಸಿಬ್ಬಂದಿ ಇಲ್ಲವಾಗಿದ್ದಾರೆ. ಎಚ್‌ಐವಿ ಪರೀಕ್ಷಾ ಕಾರ್ಯಗಳಿಗೆ ಅಡ್ಡಿಯಾಗಿದ್ದು, ಏಡ್ಸ್ ನಿಯಂತ್ರಣ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಅಲ್ಲದೆ ಈ ಕಾರ್ಯದಲ್ಲಿ ತೊಡಗಿದ್ದ ಹಲವು ಸಮುದಾಯಿಕ ಸಂಸ್ಥೆಗಳು ಚಟುವಟಿಕೆಗಳನ್ನು ಕಡಿಮೆಗೊಳಿಸಿವೆ, ಇನ್ನೂ ಕೆಲವು ಕೆಲಸವನ್ನೇ ನಿಲ್ಲಿಸಿವೆ’ ಎಂದು ಯುಎನ್‌ಎಐಡಿಎಸ್ ಗುರುವಾರ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖಿಸಿದೆ.
2025ರಲ್ಲಿ ಜಾಗತಿಕ ಎಚ್‌ಐವಿ ನಿಯಂತ್ರಣ ಕಾರ್ಯಕ್ರಮಕ್ಕೆ 4 ಬಿಲಿಯನ್ ಡಾಲರ್ ನೆರವು ನೀಡುವ ವಾಗ್ದಾನವನ್ನು ಅಮೆರಿಕ ಮಾಡಿತ್ತು. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆದೇಶದ ಮೇರೆಗೆ ಜನವರಿಯಿಂದ ಈ ನೆರವು ಸ್ಥಗಿತಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.