
ನ್ಯೂಯಾರ್ಕ್/ ವಾಷಿಂಗ್ಟನ್: ಶ್ವೇತ ಭವನದ ಸಮೀಪವೇ ಅಫ್ಗನ್ ಪ್ರಜೆ ನಡೆಸಿದ ಗುಂಡಿನ ದಾಳಿಗೆ ನ್ಯಾಷನಲ್ ಗಾರ್ಡ್‌ನ ಸೈನಿಕರೊಬ್ಬರು ಮೃತಪಟ್ಟ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಡೊನಾಲ್ಡ್ ಟ್ರಂಪ್ ಸರ್ಕಾರ, ಮೂರನೇ ಜಗತ್ತಿನ ದೇಶಗಳ ವಲಸಿಗರಿಗೆ ಶಾಶ್ವತ ನಿಷೇಧ ಹೇರುವುದಾಗಿ ತಿಳಿಸಿದೆ.
‘ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದ್ದು, ದೇಶದ ಭದ್ರತೆಗೆ ಅಪಾಯವೊಡ್ಡುವ ವಿದೇಶಿ ನಾಗರಿಕರನ್ನು ಶಾಶ್ವತವಾಗಿ ಗಡಿಪಾರು ಮಾಡಲಾಗುವುದು’ ಎಂದು ಘೋಷಿಸಿದೆ.
‘ಅತ್ಯಂತ ಅಪಾಯವೊಡ್ಡುವ ರಾಷ್ಟ್ರಗಳಿಂದ ವಲಸೆ ಬಂದವರಿಗೆ ನೀಡಲಾಗಿರುವ ಗ್ರೀನ್‌ಕಾರ್ಡ್‌ಗಳನ್ನು ಮತ್ತೆ ಕಠಿಣ ಮರು ಪರಿಶೀಲನೆಗೆ ಒಳಪಡಿಸಲಾಗುತ್ತದೆ’ ಎಂದು ತಿಳಿಸಿದೆ.
ಅಫ್ಗನ್ ಪ್ರಜೆ ರಹಮಾನುಲ್ಲಾ ಲಖನ್‌ವಾಲ್(29) ನಡೆಸಿದ ಗುಂಡಿನ ದಾಳಿಗೆ ಅಮೆರಿಕದ ಸೈನಿಕ ಸಾರಾ ಬೆಕ್‌ಸ್ಟ್ರಾಮ್ (20) ಮೃತಪಟ್ಟಿದ್ದು, ವಾಯುಸೇನೆಯ ಸಿಬ್ಬಂದಿ ಸರ್ಜೆಂಟ್ ಆ್ಯಂಡ್ರ್ಯೂ ವೂಲ್ಫ್ ತೀವ್ರವಾಗಿ ಗಾಯಗೊಂಡಿದ್ದರು. ಅವರ ಸ್ಥಿತಿ ಈಗಲೂ ಗಂಭೀರವಾಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಅಮೆರಿಕ ಸರ್ಕಾರ ವಲಸೆ ನೀತಿ ಕುರಿತಂತೆ ಹಲವು ಕಠಿಣ ನಿಯಾಮವಳಿಗಳನ್ನು ಪ್ರಕಟಿಸಿದೆ.
‘ನಾವು ತಾಂತ್ರಿಕವಾಗಿ ಮುಂದುವರಿದಿದ್ದರೂ ‘ವಲಸೆ ನೀತಿ’ಯಿಂದಾಗಿ ಕೆಲವರು ಲಾಭ ಪಡೆದುಕೊಂಡು, ಅನೇಕರ ಜೀವನಗಳನ್ನು ನಾಶಪಡಿಸಿದ್ದಾರೆ. ಹೀಗಾಗಿ, ಅಮೆರಿಕದ ಪರಿಸ್ಥಿತಿ ಮತ್ತೆ ಸುಧಾರಿಸುವವರೆಗೂ ಮೂರನೇ ಜಗತ್ತಿನ ರಾಷ್ಟ್ರಗಳ ವಲಸೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತೇನೆ. ಅಲ್ಲದೇ, ದೇಶಕ್ಕೆ ಆಸ್ತಿಯಾಗದವರು, ಅಸಮರ್ಥರು ಹಾಗೂ ದೇಶ ಪ್ರೀತಿಸದವರನ್ನೂ ಹೊರಹಾಕಲಾಗುತ್ತದೆ’ ಎಂದು ಸಾಮಾಜಿಕ ಜಾಲತಾಣ ‘ಟ್ರುಥ್’ನಲ್ಲಿ ಬರೆದಿದ್ದಾರೆ.
‘ದೇಶದ ಪ್ರಜೆಯಲ್ಲದವರಿಗೆ ನೀಡಲಾಗುತ್ತಿದ್ದ ಎಲ್ಲ ಸಬ್ಸಿಡಿ ಹಾಗೂ ಸೌಲಭ್ಯಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುತ್ತಿದ್ದೇವೆ. ದೇಶದ ನೆಮ್ಮದಿಗೆ ಭಂಗ ತರುತ್ತಿರುವ, ಭದ್ರತೆ ಧಕ್ಕೆ ಉಂಟು ಮಾಡುತ್ತಿರುವ ವಿದೇಶಿ ನಾಗರಿಕರನ್ನು ಗಡಿಪಾರು ಮಾಡಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.
‘ಅಕ್ರಮ ವಲಸಿಗರು ದೇಶದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಸಿದ್ದನ್ನು ಕೊನೆಗಾಣಿಸುವ ಗುರಿ ತಲುಪುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ’ ಎಂದು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.
‘ಹಿಮ್ಮುಖ ವಲಸೆ’ ನೀತಿ ಮಾತ್ರ ಈಗಿನ ಸ್ಥಿತಿಯನ್ನು ಸಂಪೂರ್ಣವಾಗಿ ಸರಿಪಡಿಸಬಹುದಾಗಿದೆ. ದ್ವೇಷ, ಕೊಲೆ, ಅಮೆರಿಕದ ನಾಶಕ್ಕೆ ಮುಂದಾಗುವ ಯಾರೂ ದೀರ್ಘ ಕಾಲ ದೇಶದಲ್ಲಿ ಉಳಿಯಲು ಅವಕಾಶ ನೀಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.
2021ರ ಆಗಸ್ಟ್‌ನಲ್ಲಿ ಅಫ್ಗನ್‌ನಲ್ಲಿ ತಾಲಿಬಾನ್ ಸರ್ಕಾರವು ಮರುಸ್ಥಾಪನೆಯಾದ ಬಳಿಕ ಬೈಡನ್ ಸರ್ಕಾರವು ‘ಮಿತ್ರರಾಷ್ಟ್ರಗಳಿಗೆ ಸ್ವಾಗತ’ ನೀತಿಯಡಿಯಲ್ಲಿ ವಲಸೆ ನೀತಿ ಪ್ರಕಟಿಸಿತ್ತು. ಇದರ ಅಡಿಯಲ್ಲೇ ಲಖನ್‌ವಾಲ್ ಅಮೆರಿಕಕ್ಕೆ ಪ್ರವೇಶಿಸಿದ್ದರು.
ಯಾರಿಗೆ ನಿರ್ಬಂಧ?
‘ಟ್ರಂಪ್ ಸೂಚನೆಯಂತೆ ಗ್ರೀನ್‌ಕಾರ್ಡ್ ಹೊಂದಿದ ಪ್ರತಿಯೊಬ್ಬರ ಪರಿಶೀಲನೆ ನಡೆಸಲಾಗುತ್ತದೆ. 2025ರ ನವೆಂಬರ್ 27ರವರೆಗೆ ಬಾಕಿ ಉಳಿದಿರುವ ಹಾಗೂ ಅರ್ಜಿ ಹಾಕಿರುವವರ ಮೇಲೂ ಈ ನಿಯಮ ಜಾರಿಗೆ ಬರಲಿದೆ’ ಎಂದು ಅಮೆರಿಕ ಪೌರತ್ವ ಹಾಗೂ ವಲಸೆ ಸೇವೆಗಳ ನಿರ್ದೇಶಕ (ಯುಎಸ್‌ಸಿಐಎಸ್) ಜೋಸೆಫ್ ಎಡ್ಲೊ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಸಂಸ್ಥೆಯು 19 ರಾಷ್ಟ್ರಗಳನ್ನು ಹೆಚ್ಚಿನ ಅಪಾಯ ದೇಶಗಳು ಎಂದು ಪಟ್ಟಿ ಮಾಡಿದೆ. ಅಫ್ಗಾನಿಸ್ತಾನ ಮ್ಯಾನ್ಮಾರ್ ಬುರುಂಡಿ ಛಡ್ ರಿಪಬ್ಲಿಕ್ ಆಫ್ ದ ಕಾಂಗೊ ಈಕ್ವಟೊರಿಯಲ್ ಗಿಯೆನ್ನಾ ಇರಿಟ್ರಿಯಾ ಹೈಟಿ ಇರಾನ್ ಲಾವೊಸ್ ಲಿಬಿಯಾ ಸೈಯಿರಾ ಲಿಯೋನ್ ಸೊಮಾಲಿಯಾ ಸುಡಾನ್ ಟೊಗೊ ತುರ್ಕೆಮೆನಿಸ್ತಾನ್ ವೆನಿಜುವೆಲ್ಲಾ ಯೆಮನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.