
ನ್ಯೂಯಾರ್ಕ್/ ವಾಷಿಂಗ್ಟನ್: ಇಂಡೋ–ಪೆಸಿಫಿಕ್ ಪ್ರದೇಶಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳು ಸಮಾನವಾಗಿ ಹೊಂದಿರುವ ಉದ್ದೇಶದ ಈಡೇರಿಕೆಗೆ ಪ್ರಯತ್ನಿಸುವುದು ಮತ್ತು ಚೀನಾ ಒಡ್ಡಿರುವ ಸವಾಲನ್ನು ಎದುರಿಸಲು ಭಾರತದ ಜತೆ ನಿಕಟ ರಕ್ಷಣಾ ಸಹಕಾರ ಮುಂದುವರಿಸಲು ಅಮೆರಿಕ ಬಯಸಿದೆ.
ಭಾನುವಾರ ಬಿಡುಗಡೆ ಮಾಡಿದ 2026ರ ಹಣಕಾಸು ವರ್ಷದ ಅಮೆರಿಕ ರಕ್ಷಣಾ ನೀತಿ ಮಸೂದೆಯಲ್ಲಿ ಈ ಅಂಶಕ್ಕೆ ಒತ್ತು ನೀಡಲಾಗಿದೆ. ‘ಇಂಡೊ ಪೆಸಿಫಿಕ್ ಪ್ರದೇಶದಲ್ಲಿನ ರಕ್ಷಣಾ ಸಹಕಾರ ಮತ್ತು ಪಾಲುದಾರಿಕೆ’ ಬಗ್ಗೆ ನೀತಿಯಲ್ಲಿ ವಿವರಿಸಲಾಗಿದೆ.
ಇಂಡೊ–ಪೆಸಿಫಿಕ್ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಚೀನಾದೊಂದಿಗೆ ನಡೆಯುತ್ತಿರುವ ಪೈಪೋಟಿಯಲ್ಲಿ ಅಮೆರಿಕ ಮೇಲುಗೈ ಸಾಧಿಸಲು ಕೈಗೊಳ್ಳಬೇಕಾದ ಕಾರ್ಯತಂತ್ರದ ಬಗ್ಗೆಯೂ ಮಸೂದೆಯಲ್ಲಿ ಹೇಳಲಾಗಿದೆ. ಈ ಪ್ರದೇಶದಲ್ಲಿ ಅಮೆರಿಕದ ರಕ್ಷಣಾ ಸಹಕಾರ ಮತ್ತು ಪಾಲುದಾರಿಕೆ ಬಲಪಡಿಸುವ ಪ್ರಯತ್ನಗಳನ್ನು ರಕ್ಷಣಾ ಕಾರ್ಯದರ್ಶಿ ಮುಂದುವರಿಸಬೇಕು ಎಂದು ಹೇಳಿದೆ.
ಭಾರತದ ಜತೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರದಲ್ಲಿ ತೊಡಗಿಸಿಕೊಳ್ಳುವುದು, ಜಂಟಿ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುವುದು, ರಕ್ಷಣಾ ವ್ಯಾಪಾರದ ವಿಸ್ತರಣೆ, ಮಾನವೀಯ ನೆರವು ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಪರಸ್ಪರ ಸಹಯೋಗದ ಬಗ್ಗೆಯೂ ವಿವರಿಸಲಾಗಿದೆ. ಕಡಲ ಭದ್ರತೆಗೆ ಸಂಬಂಧಿಸಿದಂತೆ ಭಾರತದ ಜತೆ ಹೆಚ್ಚಿನ ಸಹಕಾರವನ್ನು ಹೊಂದುವುದೂ ಕೂಡಾ ಇದರಲ್ಲಿ ಒಳಗೊಂಡಿದೆ.
‘ಕ್ವಾಡ್’ ಮೂಲಕ ಉಭಯ ದೇಶಗಳ ಸೇನಾ ಸಹಕಾರವನ್ನು ಬಲಪಡಿಸುವ ಬಗ್ಗೆಯೂ ಮಸೂದೆಯಲ್ಲಿ ವಿವರಿಸಲಾಗಿದೆ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣಕಾರಿ ನಡೆಯನ್ನು ಎದುರಿಸಲು ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡ ‘ಕ್ವಾಡ್’ ಗುಂಪನ್ನು 2017ರಲ್ಲಿ ಸ್ಥಾಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.