ADVERTISEMENT

ಟ್ರಂಪ್ ಜೊತೆ ಮೋದಿ ಮಾತನಾಡದ್ದಕ್ಕೆ ಒಪ್ಪಂದ ನನೆಗುದಿಗೆ ಬಿದ್ದಿದ್ದಲ್ಲ: ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2026, 13:51 IST
Last Updated 9 ಜನವರಿ 2026, 13:51 IST
ರಣಧೀರ್ ಜೈಸ್ವಾಲ್
ರಣಧೀರ್ ಜೈಸ್ವಾಲ್   

ನವದೆಹಲಿ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೇರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ಮಾತನಾಡದ ಕಾರಣ ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಎರ್ಪಟ್ಟಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವರ್ಡ್ ಲುಟ್ನಿಕ್ ಹೇಳಿಕೆ ಸರಿಯಲ್ಲ ಎಂದು ಭಾರತ ಹೇಳಿದೆ.

ಭಾರತ ವಿರುದ್ದದ ಅಮೆರಿಕದ ಕಟು ತೆರಿಗೆ ನೀತಿಯು ವ್ಯಾಪಾರ ಕಳವಳವನ್ನು ಮೀರಿ ವೈಯಕ್ತಿಕ ವಿಷಯವನ್ನು ಅವಲಂಬಿಸಿದೆ ಎಂಬುದು ಲುಟ್ನಿಕ್ ಅವರ ಅಭಿಪ್ರಾಯವಾಗಿದೆ.

ಮೋದಿ ಅವರು ವೈಯಕ್ತಿಕವಾಗಿ ಟ್ರಂಪ್ ಅವರನ್ನು ಭೇಟಿಯಾಗಿ, ಅವರ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಭಾರತದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕ ಶೇ 50ರಷ್ಟು ಸುಂಕ ವಿಧಿಸಿದೆ ಎಂಬುದು ಅವರ ಆರೋಪವಾಗಿದೆ.

ADVERTISEMENT

‘ನಾವು ಅಮೆರಿಕ ಸಚಿವರ ಹೇಳಿಕೆಯನ್ನು ಗಮನಿಸಿದ್ದೇವೆ. ಕಳೆದ ವರ್ಷ ಫೆಬ್ರುವರಿಯಿಂದ ಭಾರತ ಮತ್ತು ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಬರುವ ಬಗ್ಗೆ ಚರ್ಚೆ ನಡೆಸುತ್ತಿವೆ. ಅಂದಿನಿಂದ, ಸಮತೋಲಿತ, ಪರಸ್ಪರ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಒಪ್ಪಂದಕ್ಕೆ ಬರಲು ಹಲವು ಬಾರಿ ಚರ್ಚೆ ನಡೆದಿದೆ. ನಾವು ಒಪ್ಪಂದದ ಸನಿಹದಲ್ಲಿದ್ದೇವೆ. ಆದರೆ, ಈ ಕುರಿತ ಅಮೆರಿಕ ಸಚಿವರ ಹೇಳಿಕೆ ಸರಿಯಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 8 ಬಾರಿ ಫೋನ್ ಮೂಲಕ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಭಾರತದ ಸರಕುಗಳ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್ ಶೇ 50ರಷ್ಟು ಸುಂಕ ವಿಧಿಸಿದ ಬಳಿಕ ವ್ಯಾಪಾರ ಒಪ್ಪಂದ ಮಾತುಕತೆಗಳು ನೆನೆಗುದಿಗೆ ಬಿದ್ದಿದ್ದವು. ಶೇ 25ರಷ್ಟು ಪ್ರತಿಸುಂಕ, ರಷ್ಯಾದಿಂದ ತೈಲ ಖರೀದಿ ಹಿನ್ನೆಲೆ ಶೇ 25ರಷ್ಟು ಸುಂಕ ಸೇರಿ ಒಟ್ಟು ಶೇ 50ರಷ್ಟನ್ನು ಅಮೆರಿಕ ಹೇರಿತ್ತು.

ರಷ್ಯಾ ತೈಲ ಖರೀದಿ ಕಡಿತಗೊಳಿಸದಿದ್ದರೆ ಭಾರತದ ಮೇಲೆ ಮತ್ತಷ್ಟು ಸುಂಕ ಹೇರುವುದಾಗಿ ಅಮೆರಿಕ ಹೇಳಿದೆ. ಈ ಬೆದರಿಕೆಯು ಭಾರತದ ರೂಪಾಯಿ ಮೌಲ್ಯವನ್ನು ದಾಖಲೆಯ ಮಟ್ಟಕ್ಕೆ ಕುಸಿಯುವಂತೆ ಮಾಡಿದೆ.

ಅಮೆರಿಕ-ಭಾರತ ವ್ಯಾಪಾರ ಒಪ್ಪಂದದ ಕುರಿತಾದ ಮಾತುಕತೆಗಳು ಕೆಲ ತಿಂಗಳುಗಳಿಂದ ನಡೆಯುತ್ತಿದ್ದರೂ ಹೆಚ್ಚಿನ ಪ್ರಗತಿಯನ್ನು ಸಾಧಿಸಿಲ್ಲ,

ಕೃಷಿ ವಲಯದ ಸುಂಕದ ಒಮ್ಮತಕ್ಕೆ ಬರಲಾಗದ ಕಾರಣ ವ್ಯಾಪಾರ ಒಪ್ಪಂದ ನೆನೆಗುದಿಗೆ ಬಿದ್ದಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕವಾಗಿ ಮಾತನಾಡದ ಹಿನ್ನೆಲೆ ಒಪ್ಪಂದ ಮಾತುಕತೆ ಅಂತಿಮಗೊಂಡಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.