ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ವಾಷಿಂಗ್ಟನ್: ಭಾರತದೊಂದಿಗೆ 'ಅತಿ ದೊಡ್ಡ' ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆ ನೀಡಿದ್ದಾರೆ.
ಇದರೊಂದಿಗೆ ಉಭಯ ದೇಶಗಳ ನಡುವೆ ಬಹುನಿರೀಕ್ಷಿತ ವ್ಯಾಪಾರ ಒಪ್ಪಂದ ಏರ್ಪಡುವ ಕುರಿತಾಗಿ ಸುಳಿವು ದೊರಕಿದೆ.
ಶ್ವೇತಭವನದಲ್ಲಿ ಶುಕ್ರವಾರ ನಡೆದ 'ಬಿಗ್ ಬ್ಯೂಟಿಫುಲ್ ಬಿಲ್' ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, 'ನಾವು ಕೆಲವು ಅತ್ಯುತ್ತಮವಾದ ಒಪ್ಪಂದಗಳನ್ನು ಹೊಂದಿದ್ದೇವೆ. ಇನ್ನೊಂದು ಬರಲಿದೆ, ಬಹುಶಃ ಭಾರತದೊಂದಿಗೆ, ಅತಿ ದೊಡ್ಡದಾಗಿರಲಿದೆ' ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಚೀನಾದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಆದರೆ ಈ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.
'ಪ್ರತಿಯೊಬ್ಬರು ಒಪ್ಪಂದ ಮಾಡಿಕೊಳ್ಳಲು ಬಯಸುತ್ತಾರೆ. ನಾವೀಗ ಚೀನಾದೊಂದಿಗೆ ಸಹಿ ಹಾಕಿದ್ದೇವೆ. ನಿಜಕ್ಕೂ ಅತ್ಯುತ್ತಮ ಒಪ್ಪಂದ' ಎಂದು ಹೇಳಿದ್ದಾರೆ.
ಅಮೆರಿಕದೊಂದಿಗೆ ಮುಂದಿನ ಸುತ್ತಿನ ವ್ಯಾಪಾರ ಮಾತುಕತೆಗಾಗಿ ವಾಣಿಜ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್ ಅಗರವಾಲ್ ಗುರುವಾರ ವಾಷಿಂಗ್ಟನ್‌ಗೆ ಆಗಮಿಸಿದ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಉಭಯ ದೇಶಗಳು ಜುಲೈ 9ರೊಳಗೆ ಒಪ್ಪಂದ ಅಂತಿಮಗೊಳಿಸಲು ಪ್ರಯತ್ನಿಸುತ್ತಿವೆ. ಏಪ್ರಿಲ್ 2ರಂದು ಅಧಿಕ ಸುಂಕ ಘೋಷಿಸಿದ್ದ ಟ್ರಂಪ್ ಬಳಿಕ ಜುಲೈ 9ರವರೆಗೆ ತಡೆಹಿಡಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.