ADVERTISEMENT

ಮೋದಿ ಜತೆ ಮಾತುಕತೆಗೆ ಟ್ರಂಪ್‌ ಇಂಗಿತ

ಪಿಟಿಐ
Published 10 ಸೆಪ್ಟೆಂಬರ್ 2025, 1:52 IST
Last Updated 10 ಸೆಪ್ಟೆಂಬರ್ 2025, 1:52 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್‌ ಟ್ರಂಪ್‌</p></div>

ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್‌ ಟ್ರಂಪ್‌

   

ಪಿಟಿಐ ಚಿತ್ರ

ನ್ಯೂಯಾರ್ಕ್‌/ ವಾಷಿಂಗ್ಟನ್‌: ‘ಆತ್ಮೀಯ ಗೆಳೆಯ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮುಂಬರುವ ವಾರಗಳಲ್ಲಿ ಮಾತುಕತೆಗೆ ಎದುರು ನೋಡುತ್ತಿದ್ದೇನೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಂಗಳವಾರ ಹೇಳಿದ್ದಾರೆ.

ADVERTISEMENT

‘ಭಾರತ–ಅಮೆರಿಕ ನಡುವಣ ವ್ಯಾಪಾರ ನಿರ್ಬಂಧಗಳಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಉಭಯ ದೇಶಗಳ ಮಧ್ಯೆ ಮಾತುಕತೆ ಮುಂದುವರಿದಿದೆ ಎಂದು ಹೇಳಲು ಸಂತಸವಾಗುತ್ತಿದೆ’ ಎಂದು ಟ್ರಂಪ್‌ ಅವರು ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ‘ಟ್ರುತ್ ಸೋಷಿಯಲ್‌’ನಲ್ಲಿ ಮಂಗಳವಾರ ಬರೆದುಕೊಂಡಿದ್ದಾರೆ.

‘ವ್ಯಾಪಾರ ಮಾತುಕತೆ ಕುರಿತು ಭಾರತ ಮತ್ತು ಅಮೆರಿಕ ದೇಶಗಳು ಶೀಘ್ರವೇ ಅಂತಿಮ ನಿರ್ಣಯ ಕೈಗೊಳ್ಳಲಿವೆ’ ಎಂದೂ ಅವರು ತಿಳಿಸಿದ್ದಾರೆ.

ಭಾರತದ ಮೇಲೆ ಹೆಚ್ಚಿನ ಸುಂಕ ವಿಧಿಸುವ ಟ್ರಂಪ್‌ ನಿರ್ಧಾರವು ಉಭಯ ದೇಶಗಳ ನಡುವಣ ಸಂಬಂಧವನ್ನು ಹದಗೆಡಿಸಿದೆ. ಈ ಮಧ್ಯೆಯೇ ಟ್ರಂಪ್ ಅವರ ಈ ರೀತಿಯ ಹೇಳಿಕೆಗಳು ಉಭಯ ದೇಶಗಳ ನಡುವಿನ ಅಸಮಾಧಾನವನ್ನು ಶಮನ ಮಾಡುವ ದಿಸೆಯಲ್ಲಿ ಮಹತ್ವದ ಹೆಜ್ಜೆ ಎಂದು ವಿಶ್ಲೇಷಿಸಲಾಗುತ್ತಿದೆ.

ಟ್ರಂಪ್‌ ಜತೆ ಮಾತುಕತೆಗೆ ಉತ್ಸುಕ: ಮೋದಿ

ಟ್ರಂಪ್‌ ಅವರ ಹೇಳಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ‘ಟ್ರಂಪ್‌ ಅವರೊಂದಿಗೆ ಮಾತುಕತೆ ನಡೆಸಲು ನಾನೂ ಉತ್ಸುಕನಾಗಿದ್ದೇನೆ’ ಎಂದು ಬುಧವಾರ ಹೇಳಿದರು.

ಭಾರತ ಮತ್ತು ಅಮೆರಿಕ ಮಧ್ಯೆ ಉತ್ತಮ ಬಾಂಧವ್ಯವಿದ್ದು ಸ್ವಾಭಾವಿಕ ಪಾಲುದಾರಿಕೆಯನ್ನು ಹೊಂದಿವೆ. ವಾಪಾರ ಮಾತುಕತೆ ಕುರಿತು ಶೀಘ್ರದಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲು ಉಭಯ ದೇಶಗಳು ಶ್ರಮಿಸುತ್ತಿವೆ ಎಂದು ಅವರು ‘ಎಕ್ಸ್‌’ನಲ್ಲಿ ತಿಳಿಸಿದರು.

ಉಭಯ ದೇಶಗಳ ಜನರಿಗೆ ಉಜ್ವಲ ಸಮೃದ್ಧ ಭವಿಷ್ಯವನ್ನು ಖಚಿತಪಡಿಸಲು ಭಾರತ–ಅಮೆರಿಕ ಒಟ್ಟಿಗೆ ಕೆಲಸ ಮಾಡಲಿವೆ ಎಂದು ಹೇಳಿದರು.

‘ಕೈ’ ಟೀಕೆ: 

‘ಉಭಯ ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ವಿಚಾರವನ್ನು ಮುಂದಿಡುವ ಮೂಲಕ ಭಾರತ ಮತ್ತು ಪಾಕಿಸ್ತಾನ ನಡುವೆ ಮೇನಲ್ಲಿ ನಡೆದ ಯುದ್ಧವನ್ನು ನಿಲ್ಲಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 35ಕ್ಕೂ ಹೆಚ್ಚು ಬಾರಿ ಹೇಳಿದ್ದಾರೆ‘ ಎಂದಿರುವ ಕಾಂಗ್ರೆಸ್‌ ಇದೇ ವಿಷಯವನ್ನು ಮುಂದಿಟ್ಟುಕೊಂಡು ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದೆ.

‘ಭಾರತ ಮತ್ತು ಅಮೆರಿಕ ಸಹಜ ಪಾಲುದಾರ ರಾಷ್ಟ್ರಗಳು’ ಎಂಬುದಾಗಿ ಹೇಳಿರುವ ಪ್ರಧಾನಿ ಮೋದಿ ಅವರ ಮಾತಿಗೆ ಕಾಂಗ್ರೆಸ್‌ ಈ ಪ್ರತಿಕ್ರಿಯೆ ನೀಡಿದೆ. ‘ಭಾರತ ಮತ್ತು ಅಮೆರಿಕ ಸಹಜ ಪಾಲುದಾರ ರಾಷ್ಟ್ರಗಳು ಎಂದು ಮೋದಿ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಾನು ನಿಲ್ಲಿಸಿದ್ದಾಗಿ ಟ್ರಂಪ್‌ 35ಕ್ಕೂ ಹೆಚ್ಚು ಬಾರಿ ಹೇಳುವಷ್ಟರ ಮಟ್ಟಿಗೆ ಭಾರತ ಮತ್ತು ಅಮೆರಿಕ ಪಾಲುದಾರ ರಾಷ್ಟ್ರಗಳಾಗಿವೆಯೇ’ ಎಂದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಪ್ರಶ್ನಿಸಿದ್ದಾರೆ.

ಭಾರತ ಚೀನಾದ ಮೇಲೆ 100% ಸುಂಕ ವಿಧಿಸಿ: ಟ್ರಂಪ್‌ ಒತ್ತಡ

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮೇಲೆ ಒತ್ತಡ ಹೇರುವ ಕಾರ್ಯತಂತ್ರದ ಭಾಗವಾಗಿ ಭಾರತ ಮತ್ತು ಚೀನಾದ ಮೇಲೆ ಶೇ 100ರಷ್ಟು ಸುಂಕ ವಿಧಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುರೋಪಿಯನ್ ಒಕ್ಕೂಟವನ್ನು ಒತ್ತಾಯಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿ ಮತ್ತು ಯುರೋಪಿಯನ್ ಒಕ್ಕೂಟದ ರಾಜತಾಂತ್ರಿಕರೊಬ್ಬರು ಹೇಳಿದ್ದಾರೆ.

‘ಚೀನಾ ಮತ್ತು ಭಾರತ ರಷ್ಯಾದಿಂದ ತೈಲ ಖರೀದಿಸುವ ಪ್ರಮುಖ ರಾಷ್ಟ್ರಗಳಾಗಿವೆ. ಹೀಗಾಗಿ ರಷ್ಯಾದ ಆರ್ಥಿಕತೆಯನ್ನು ಬಲಪಡಿಸುವಲ್ಲಿ  ಉಭಯ ರಾಷ್ಟ್ರಗಳು ಪ್ರಮುಖ ಪಾತ್ರವಹಿಸುತ್ತಿವೆ. ಇದರಿಂದಾಗಿಯೇ 2022ರಿಂದ ಉಕ್ರೇನ್ ಮೇಲೆ ರಷ್ಯಾ ನಿರಂತರವಾಗಿ ದಾಳಿ ಮಾಡುತ್ತಿದೆ. ಈಗ ಉಕ್ರೇನ್‌ ಮೇಲಿನ ಯುದ್ಧವನ್ನು ಅಂತ್ಯಗೊಳಿಸುವುದಕ್ಕಾಗಿ ಪುಟಿನ್‌ ಮೇಲೆ ಒತ್ತಡ ಹೇರಬೇಕು. ಇದಕ್ಕಾಗಿ ಚೀನಾ ಮತ್ತು ಭಾರತದ ಮೇಲೆ ಶೇ100ರಷ್ಟು ಸುಂಕ ವಿಧಿಸಬೇಕು’ ಎಂದು ಟ್ರಂಪ್ ಒತ್ತಾಯಿಸಿರುವುದಾಗಿ ಅವರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.