ADVERTISEMENT

‘ಮರೀನ್‌ ಕೋರ್‌’ ತರಬೇತಿಗೆ ಸಿಖ್ಖರನ್ನು ನಿಷೇಧಿಸುವಂತಿಲ್ಲ: ಅಮೆರಿಕ ನ್ಯಾಯಾಲಯ

ಪಿಟಿಐ
Published 25 ಡಿಸೆಂಬರ್ 2022, 12:44 IST
Last Updated 25 ಡಿಸೆಂಬರ್ 2022, 12:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ವಾಷಿಂಗ್ಟನ್‌ : ‘ಗಡ್ಡ ಹಾಗೂ ಟರ್ಬನ್ ಕಾರಣಕ್ಕೆ ಸಿಖ್‌ ಸಮುದಾಯದವರನ್ನು ನೌಕಾಪಡೆಯ ‘ಮರೀನ್‌ ಕೋರ್‌’ನ ತರಬೇತಿ ಪಡೆಯಲು ನಿರಾಕರಣೆ ಮಾಡುವಂತಿಲ್ಲ’ ಎಂದು ಅಮೆರಿಕದ ಮೇಲ್ಮನವಿ ನ್ಯಾಯಾಲಯವೊಂದು ಶುಕ್ರವಾರ ಆದೇಶ ನೀಡಿದೆ.

ಈ ಆದೇಶದನ್ವಯ, ಸಿಖ್‌ ಸಮುದಾಯದ ಮೂವರು ತಮ್ಮ ಧಾರ್ಮಿಕ ಅಸ್ಮಿತೆಯನ್ನು ಕಳೆದುಕೊಳ್ಳದೆಯೇ ‘ಮರೀನ್‌ ಕೋರ್‌’ನ ತರಬೇತಿಗೆ ದಾಖಲಾಗಬಹುದಾಗಿದೆ.

‘ನ್ಯಾಯಾಲಯದ ಈ ಆದೇಶವು ಧಾರ್ಮಿಕ ಸ್ವಾತಂತ್ರವನ್ನು ಗೌರವಿಸುವ ಬಹುಮುಖ್ಯವಾದ ಆದೇಶವಾಗಿದೆ. ಹಲವು ವರ್ಷಗಳಿಂದ ಸಿಖ್‌ ಸಮುದಾಯದವರನ್ನು ‘ಮರೀನ್‌ ಕೋರ್‌’ ಹೊರಗಿಟ್ಟಿತ್ತು’ ಎಂದು ಮೂವರು ಸಿಖ್‌ ಯುವಕರ ಪರ ವಕೀಲ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಆಗಿದ್ದೇನು?: ‘ಮರೀನ್‌ ಕೋರ್‌’ನ ತರಬೇತಿ ನಿಯಮದ ಅನುಸಾರ ಆಕಾಶ್‌ ಸಿಂಗ್‌, ಜಸ್ಕಿರತ್‌ ಸಿಂಗ್‌ ಹಾಗೂ ಮಿಲಾಪ್‌ ಸಿಂಗ್‌ ಚಾಚಲ್‌ ಅವರಿಗೆ ತರಬೇತಿಗೆ ನಿರಾಕರಿಸಲಾಗಿತ್ತು. ಇದಕ್ಕೆ ಸಿಟ್ಟಿಗೆದ್ದ ಮೂವರೂ, ಇದು ನಮ್ಮ ಧಾರ್ಮಿಕ ನಂಬಿಕೆ ಎಂದು ವಾದಿಸಿದ್ದರು. ಗಡ್ಡವನ್ನು ತೆಗೆದರೆ ಮಾತ್ರ ತರಬೇತಿಗೆ ಅನುವು ಮಾಡಿಕೊಡಲಾಗುವುದು ಎಂದು‘ಮರೀನ್‌ ಕೋರ್‌’ ಹೇಳಿತ್ತು.

ಇದಾದ ಬಳಿಕ ಈ ಮೂವರು ಸೆಪ್ಟೆಂಬರ್‌ನಲ್ಲಿ ಸ್ಥಳೀಯ ನ್ಯಾಯಾಲಯದ ಮೊರೆ ಹೋದರು. ಆ ನ್ಯಾಯಾಲಯವು ಈ ಮೂವರ ಪರ ಆದೇಶ ನೀಡಲಿಲ್ಲ. ನಂತರ ಅವರು ಅಮೆರಿಕದ ಮೇಲ್ಮನವಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.