ADVERTISEMENT

ಅಮೆರಿಕದಲ್ಲಿ ಕರ್ನಾಟಕದ ಚಂದ್ರಮೌಳಿ ಹತ್ಯೆ; ಆರೋಪಿ ವಿರುದ್ಧ ಕ್ರಮ: ಟ್ರಂಪ್‌

ಪಿಟಿಐ
Published 15 ಸೆಪ್ಟೆಂಬರ್ 2025, 13:28 IST
Last Updated 15 ಸೆಪ್ಟೆಂಬರ್ 2025, 13:28 IST
ಚಂದ್ರಮೌಳಿ ನಾಗಮಲ್ಲಯ್ಯ
ಚಂದ್ರಮೌಳಿ ನಾಗಮಲ್ಲಯ್ಯ   

ಹ್ಯೂಸ್ಟನ್‌/ನ್ಯೂಯಾರ್ಕ್‌: ಅಮೆರಿಕದ ಡಲ್ಲಾಸ್‌ನಲ್ಲಿದ್ದ ಮೋಟೆಲ್‌ ಮ್ಯಾನೇಜರ್‌, ಕರ್ನಾಟಕದ ಚಂದ್ರಮೌಳಿ ನಾಗಮಲ್ಲಯ್ಯ (50) ಅವರ ಹತ್ಯೆಯ ಆರೋಪಿ ವಿರುದ್ಧ ಉದ್ದೇಶಪೂರ್ವಕ ಕೊಲೆ ಆರೋಪದಡಿ ಪ್ರಕರಣ ದಾಖಲಿಸಲಾಗುವುದು. ಆತನ ವಿರುದ್ಧ ಸಂಪೂರ್ಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ. 

ಈ ಬಗ್ಗೆ ‘ಎಕ್ಸ್‌’ ಖಾತೆಯಲ್ಲಿ ‍ಪೋಸ್ಟ್ ಮಾಡಿರುವ ಅವರು, ‘ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿದ್ದ, ಗೌರವಾನ್ವಿತ ವ್ಯಕ್ತಿಯಾಗಿದ್ದ ಚಂದ್ರಮೌಳಿ ಅವರ ಹತ್ಯೆ ಕುರಿತ ಮಾಹಿತಿ ನನಗೆ ತಿಳಿದಿದೆ. ನಮ್ಮ ದೇಶದಲ್ಲಿ ಎಂದಿಗೂ ಇರಬಾರದಾಗಿದ್ದ, ಕ್ಯೂಬಾದ ಅಕ್ರಮ ವಲಸಿಗನೊಬ್ಬ, ಚಂದ್ರಮೌಳಿ ಅವರ ಪತ್ನಿ, ಪುತ್ರನ ಎದುರು ಅವರ ಶಿರಚ್ಛೇದ ಮಾಡಿ ಹತ್ಯೆ ಮಾಡಿದ್ದಾನೆ’ ಎಂದು ಬರೆದುಕೊಂಡಿದ್ದಾರೆ.  

ಹಿಂದಿನ ಅಧ್ಯಕ್ಷ ಜೋ ಬಿಡೆನ್‌ ಅವರ ವಲಸೆ ನೀತಿಯನ್ನು ದೂಷಿಸಿದ ಟ್ರಂಪ್‌, ‘ದಾಳಿಕೋರರನ್ನು ಅಕ್ರಮ ವಿದೇಶಿ ವಲಸಿಗರು ಎಂದು ಕರೆಯಲಾಗಿತ್ತು. ಇಂತವರನ್ನು ಗಡೀಪಾರು ಮಾಡಬೇಕಿತ್ತು. ಅಕ್ರಮ ವಲಸಿಗ ಅಪರಾಧಿಗಳನ್ನು ಮೃದುವಾಗಿ ಕಾಣುವ ಸಮಯ ಮುಗಿದಿದೆ’ ಎಂದಿದ್ದಾರೆ. 

ADVERTISEMENT

ಡಲ್ಲಾಸ್‌ನ ‘ಡೌನ್‌ಟೌನ್‌ ಸ್ಯೂಟ್‌’ ಮೋಟೆಲ್‌ನಲ್ಲಿ ಸಹೋದ್ಯೋಗಿಯಾಗಿದ್ದ, ಕ್ಯೂಬಾದ ಯೋರ್ಡನಿಸ್‌ ಕೊಬಾಸ್‌ ಮಾರ್ಟಿನೆಜ್‌ ಎಂಬಾತ ಚಂದ್ರಮೌಳಿ ಅವರ ತಲೆಯನ್ನು ಮಚ್ಚಿನಿಂದ ಕಡಿದು ಕೊಲೆ ಮಾಡಿದ್ದ. ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.