ADVERTISEMENT

ಬಾಗ್ದಾದ್‌, ಎರ್ಬಿಲ್ ತೊರೆಯಿರಿ

ತುರ್ತು ಪರಿಸ್ಥಿತಿಯೇತರ ಸಿಬ್ಬಂದಿಗೆ ಅಮೆರಿಕ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಮೇ 2019, 2:29 IST
Last Updated 16 ಮೇ 2019, 2:29 IST
.
.   

ವಾಷಿಂಗ್ಟನ್‌: ಇರಾಕ್‌ನ ಬಾಗ್ದಾದ್‌ನಲ್ಲಿರುವ ರಾಯಭಾರಿ ಕಚೇರಿ ಮತ್ತು ಎರ್ಬಿಲ್ ನಲ್ಲಿರುವ ಕಾನ್ಸುಲೇಟ್ ಕಚೇರಿಯನ್ನು ತೊರೆಯುವಂತೆತುರ್ತು ಪರಿಸ್ಥಿತಿಯೇತರ ಸಿಬ್ಬಂದಿಗೆ ಅಮೆರಿಕ ಸೂಚಿಸಿದೆ‌.

ಇರಾಕ್‌ನ ನೆರೆಯ ರಾಷ್ಟ್ರ ಇರಾನ್ ಜತೆಗಿನ ಸಂಬಂಧ ಮತ್ತಷ್ಟು ಹದಗೆಟ್ಟಿರುವ ಕಾರಣ ಅಮೆರಿಕ ಈ ಹೆಜ್ಜೆಯಿಟ್ಟಿದೆ.

ಇರಾನ್‌ ದಾಳಿ ನಡೆಸಲು ಹೊಂಚು ಹಾಕುತ್ತಿದೆ ಎಂದು ಆರೋಪಿಸಿರುವ ಅಮೆರಿಕ,ಗಲ್ಫ್‌ ರಾಷ್ಟ್ರಗಳಲ್ಲಿ ಮಿಲಿಟರಿ ಶಕ್ತಿಯನ್ನು ವೃದ್ದಿಸಿದೆ.

ADVERTISEMENT

ಇರಾನ್ ಮೇಲೆ ರಾಜತಾಂತ್ರಿಕ ಒತ್ತಡ ಹೇರುವ ಕಾರ್ಯವನ್ನು ಅಮೆರಿಕ ಮುಂದುವರಿಸಿದೆ. ಈ ನಿಟ್ಟಿನಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಕಳೆದ ವಾರ ಇರಾಕ್‌ಗೆ ಭೇಟಿ ನೀಡಿದ್ದು, ಆ ರಾಷ್ಟ್ರದೊಂದಿಗೆ ಹಲವು ಒಪ್ಪಂದ ಮಾಡಿಕೊಂಡಿದ್ದಾರೆ. ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಅಮೆರಿಕ ಈಗ ಇರಾನ್‌ನ ಶತ್ರು ರಾಷ್ಟ್ರವಾದ ಇರಾಕ್ ಜೊತೆಗೆ ಕೈಜೋಡಿಸಿದೆ.

ಇರಾಕ್‌ನಲ್ಲಿ ಭಯೋತ್ಪಾದಕ ಮತ್ತು ಪ್ರತ್ಯೇಕತಾವಾದಿ ಗುಂಪುಗಳು ಅಲ್ಲಿನ ನಾಗರಿಕರು ಮತ್ತು ಭದ್ರತಾ ಪಡೆಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಲೇ ಇವೆ.

ಅಮೆರಿಕ ವಿರೋಧಿ ಉಗ್ರರು ಇರಾಕ್‌ನಲ್ಲಿರುವ ಅಮೆರಿಕ ಪ್ರಜೆಗಳು ಮತ್ತು ಪಾಶ್ಚಾತ್ಯ ಕಂಪನಿಗಳಿಗೆ ಬೆದರಿಕೆ ಒಡ್ಡುವ ಸಂಭವವಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಇರಾನ್ ಅಮೆರಿಕದ ಮೇಲೆ ಯಾವುದೇ ರೀತಿಯ ದಾಳಿ ನಡೆಸಿದರೆ, ಅಮೆರಿಕ ಅದಕ್ಕೆ ತಕ್ಕ ಉತ್ತರ ನೀಡಲಿದೆ. ಇದು, ಇರಾನ್‌ನ ಮೈತ್ರಿ ರಾಷ್ಟ್ರಗಳಿಗೂ ಅನ್ವಯಿಸಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಎಚ್ಚರಿಸಿದ್ದಾರೆ.

ಬಾಗ್ದಾದ್‌ ಸೇರಿದಂತೆ ಹಲವು ಪ್ರದೇಶಗಳಲ್ಲಿ ಐಇಡಿ ಸ್ಫೋಟ ಸಂಭವಿಸುವ ಸಾಧ್ಯತೆ ಇದೆ ಎಂದೂಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.