ವಾಷಿಂಗ್ಟನ್: ಕೋವಿಡ್ ವಿರುದ್ಧದ ಲಸಿಕೆಗಳಿಗೆ ಬೌದ್ಧಿಕ ಆಸ್ತಿ ಹಕ್ಕುಗಳ ಕಾಯ್ದೆಯಿಂದ ವಿನಾಯಿತಿ ನೀಡುವಂತೆ ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ವಿಶ್ವ ವಾಣಿಜ್ಯ ಸಂಸ್ಥೆಗೆ ಸಲ್ಲಿಸಿರುವ ಪ್ರಸ್ತಾವನೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಬೆಂಬಲ ಸೂಚಿಸಲು ನಿರ್ಧರಿಸಿದ್ದಾರೆ. ಆದರೆ, ಅಮೆರಿಕದ ಔಷಧೀಯ ವ್ಯಾಪಾರ ಸಂಸ್ಥೆಗಳ ಒಕ್ಕೂಟ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.
‘ಈ ನಿರ್ಧಾರವು ಸಾರ್ವಜನಿಕ ಮತ್ತು ಖಾಸಗಿ ಪಾಲುದಾರರ ನಡುವೆ ಗೊಂದಲವನ್ನು ಸೃಷ್ಟಿಸಲಿದೆ. ಈಗಾಗಲೇ ಒತ್ತಡಕ್ಕೊಳಗಾಗಿರುವ ಪೂರೈಕೆ ಸರಪಳಿಗಳನ್ನು ಮತ್ತಷ್ಟು ದುರ್ಬಲಗೊಳಿಸಲಿದೆ. ಜತೆಗೆ ಇದರಿಂದಾಗಿ ನಕಲಿ ಲಸಿಕೆಗಳ ವಿತರಣೆಯೂ ಹೆಚ್ಚಬಹುದು’ ಎಂದು ಅಮೆರಿಕ ಪ್ರಮುಖ ಬಯೋಫಾರ್ಮಾಸ್ಯುಟಿಕಲ್ ಸಂಶೋಧನಾ ಕಂಪನಿಗಳನ್ನು ಪ್ರತಿನಿಧಿಸುವ ಪಿಎಚ್‌ಆರ್‌ಎಂಎ ಹೇಳಿದೆ.
‘ಬಯೋಮೆಡಿಕಲ್ ಅನ್ವೇಷಣೆಯಲ್ಲಿ ನಮ್ಮ ನಾಯಕತ್ವವನ್ನು ಹಾಳುಮಾಡಲು ಪ್ರಯತ್ನಿಸುತ್ತಿರುವ ದೇಶಗಳಿಗೆ ಅಮೆರಿಕದ ಆವಿಷ್ಕಾರವನ್ನು ನೀಡುವ ನಿರ್ಧಾರವು ಅಮೆರಿಕದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ದಿಗೊಳಿಸುವ ಮತ್ತು ಉದ್ಯೋಗ ಸೃಷ್ಟಿಸುವ ನೀತಿಗೆ ಮುಳುವಾಗಲಿದೆ’ ಎಂದು ಪಿಎಚ್‌ಆರ್‌ಎಂಎನ ಅಧ್ಯಕ್ಷ ಮತ್ತು ಸಿಇಒ ಸ್ಟೀಫನ್ ಜೆ.ಯುಬಿಲ್ ದೂರಿದ್ದಾರೆ.
‘ಈ ನಿರ್ಧಾರದಿಂದಾಗಿ ಲಸಿಕೆ ಪೂರೈಕೆಯಂತಹ ನಿಜವಾದ ಸಮಸ್ಯೆಗಳು ನಿವಾರಣೆ ಆಗುವುದಿಲ್ಲ. ಬಯೋಫಾರ್ಮಾಸ್ಯುಟಿಕಲ್ ಉತ್ಪಾದಕರು ಜಾಗತಿಕವಾಗಿ ಲಸಿಕೆ ಪೂರೈಸಲು ಬದ್ಧರಾಗಿದ್ದಾರೆ. ನಾವು ಹೆಚ್ಚಿನ ಲಸಿಕೆಯನ್ನು ಉತ್ಪಾದಿಸಲು ಬೇರೆ ಕಂಪನಿಗಳೊಂದಿಗೆ ಕೈ ಜೋಡಿಸುತ್ತಿದ್ದೇವೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.