
ಡೊನಾಲ್ಡ್ ಟ್ರಂಪ್ ಮತ್ತು ವಿವೇಕ್ ರಾಮಸ್ವಾಮಿ
ವಾಷಿಂಗ್ಟನ್: ಒಹಿಯೊ ರಾಜ್ಯದ ಗವರ್ನರ್ ಸ್ಥಾನಕ್ಕೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ನಾಯಕ, ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ವಿವೇಕ್ ಅವರು ಒಹಿಯೊದ ಅತ್ಯುತ್ತಮ ಗವರ್ನರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ‘ಟ್ರೂತ್’ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ‘ವಿವೇಕ್ ರಾಮಸ್ವಾಮಿ ಅವರಿಗೆ ನನ್ನ ಪೂರ್ಣ ಬೆಂಬಲ ಮತ್ತು ಅನುಮೋದನೆ ಇದೆ. ಅವರು ಎಂದಿಗೂ ನಿಮ್ಮನ್ನು ತಲೆತಗ್ಗಿಸುವಂತೆ ಮಾಡುವುದಿಲ್ಲ’ ಎಂದಿದ್ದಾರೆ.
‘ಅವರು ನನ್ನ ವಿರುದ್ಧ ಸ್ಪರ್ಧಿಸಿದ್ದರು ಎಂಬುದು ಗೊತ್ತಿದೆ. ಅವರಲ್ಲಿ ಏನೋ ವಿಶೇಷತೆಯಿದೆ. ಅವರು ಯುವ, ಬಲಿಷ್ಠ ಮತ್ತು ಜಾಣರಿದ್ದಾರೆ. ಅಲ್ಲದೆ ಅತ್ಯುತ್ತಮ ವ್ಯಕ್ತಿಯಾಗಿದ್ದು, ಅಮೆರಿಕವನ್ನು ನಿಜವಾಗಿಯೂ ಪ್ರೀತಿಸುತ್ತಾರೆ’ ಎಂದು ಹೇಳಿದ್ದಾರೆ.
‘ನಿಮ್ಮ ಮುಂದಿನ ಗವರ್ನರ್ ವಿವೇಕ್ ಅವರು ಆರ್ಥಿಕ ಪ್ರಗತಿಗಾಗಿ ದಣಿವರಿಯದೆ ಕೆಲಸ ಮಾಡಲಿದ್ದಾರೆ. ತೆರಿಗೆ ಕಡಿತಗೊಳಿಸುವ ನಿಟ್ಟಿನಲ್ಲಿ ನಿಯಮಗಳನ್ನು ತರಲಿದ್ದಾರೆ. ‘ಮೇಡ್ ಇನ್ ಅಮೆರಿಕ’ವನ್ನು ಪ್ರಚುರಪಡಿಸಲಿದ್ದಾರೆ. ಇಂಧನ ಕ್ಷೇತ್ರದಲ್ಲಿ ಅಮೆರಿಕದ ಪ್ರಾಬಲ್ಯ ಮುಂದುವರಿಸಲು, ಗಡಿಯನ್ನು ಅತ್ಯಂತ ಸುರಕ್ಷಿತಗೊಳಿಸಲು, ವಲಸೆ ಮತ್ತು ಅಪರಾಧ ತಡೆಯಲು, ನಮ್ಮ ಸೇನೆಯನ್ನು ಬಲಿಷ್ಠಗೊಳಿಸಲು, ಕಾನೂನು ಸುವ್ಯವಸ್ಥೆ ಹಾಗೂ ಏಕತೆಯನ್ನು ಕಾಯ್ದುಕೊಳ್ಳಲು ಶ್ರಮಿಸಲಿದ್ದಾರೆ’ ಎಂದು ಟ್ರಂಪ್ ವಿವರಿಸಿದ್ದಾರೆ.
ಟ್ರಂಪ್ ಅವರ ಬೆಂಬಲ ಮತ್ತು ಅನುಮೋದನೆಗೆ ಧನ್ಯವಾದ ಹೇಳಿರುವ 40 ವರ್ಷದ ವಿವೇಕ್ ರಾಮಸ್ವಾಮಿ ಅವರು, ‘ಒಹಿಯೊ ಅನ್ನು ಹಿಂದೆಂದಿಗಿಂತಲೂ ಶ್ರೇಷ್ಠವಾಗಿಸೋಣ’ ಎಂದಿದ್ದಾರೆ.
ಕೇರಳದ ಪಾಲಕ್ಕಾಡ್‌ನಿಂದ ಅಮೆರಿಕಕ್ಕೆ ವಲಸೆ ಹೋದ ತಮಿಳು ದಂಪತಿಯ ಮಗನಾಗಿ 1985ರಲ್ಲಿ ಸಿನ್ಸಿನಾಟಿಯಲ್ಲಿ ಜನಿಸಿದ ವಿವೇಕ್ ರಾಮಸ್ವಾಮಿ, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಜೀವವಿಜ್ಞಾನ ವಿಷಯದಲ್ಲಿ ಪದವಿ ಪಡೆದರು. ನಂತರ ‘ಯೇಲ್ ಲಾ ಸ್ಕೂಲ್’ನಲ್ಲಿ ಕಾನೂನು ಪದವಿ ಪಡೆದರು. ಅಮೆರಿಕದಲ್ಲಿ ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉದ್ಯಮಿಯಾಗಿದ್ದಾರೆ.
ರಿಪಬ್ಲಿಕನ್ ಪಕ್ಷದಲ್ಲಿ ಪ್ರಾಥಮಿಕ ಹಂತದ ಚುನಾವಣೆಗೂ ಮೊದಲು ವಿವೇಕ್ ರಾಮಸ್ವಾಮಿ ಅವರೂ ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿಯಾಗಿ ಅಮೆರಿಕದ ವಿವಿಧ ರಾಜ್ಯಗಳಲ್ಲಿ ಕಾರ್ಯಕರ್ತರ ಹಲವು ಸಭೆಗಳನ್ನು ನಡೆಸಿದ್ದರು. ನಂತರ ಡೊನಾಲ್ಡ್ ಟ್ರಂಪ್ ಹೆಚ್ಚು ಜನಪ್ರಿಯ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದರಿಂದ ಅವರ ಸ್ಪರ್ಧೆಯನ್ನು ಅನುಮೋದಿಸಿ ಕಣದಿಂದ ಹಿಂದೆ ಸರಿದಿದ್ದರು.
ಟೆಸ್ಲಾ ಮಾಲೀಕ, ಉದ್ಯಮಿ ಎಲಾನ್ ಮಸ್ಕ್ ಅವರ ಜತೆಗೆ ಉದ್ಯಮಿ ವಿವೇಕ್ ರಾಮಸ್ವಾಮಿ ಅವರನ್ನೂ ಟ್ರಂಪ್ ಅವರು ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆಯ (ಡಿಒಜಿಇ) ಉಸ್ತುವಾರಿಯನ್ನಾಗಿ ನೇಮಿಸಿದ್ದರು. ಆದರೆ, ಒಹಿಯೊ ಗವರ್ನರ್ ಹುದ್ದೆಗೆ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದ ವಿವೇಕ್ ಅವರು ಡಿಒಜಿಇ ಅನ್ನು ತ್ಯಜಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.