ADVERTISEMENT

ಬೈಡನ್–ಜಿನ್‌ಪಿಂಗ್ ಮೊದಲ ವರ್ಚುವಲ್ ಸಭೆ: ಸ್ಪರ್ಧೆಯ ನಿರ್ವಹಣೆ ಬಗ್ಗೆ ಚರ್ಚೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2021, 5:38 IST
Last Updated 15 ನವೆಂಬರ್ 2021, 5:38 IST
ಜೋ ಬೈಡನ್ ಹಾಗೂ ಕ್ಸಿ ಜಿನ್‌ಪಿಂಗ್
ಜೋ ಬೈಡನ್ ಹಾಗೂ ಕ್ಸಿ ಜಿನ್‌ಪಿಂಗ್    

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಇಂದು (ಸೋಮವಾರ) ವರ್ಚುವಲ್ ಸಭೆ ಮೂಲಕ ಮಾತುಕತೆ ನಡೆಸಲಿದ್ದಾರೆ. ಉಭಯ ದೇಶಗಳ ನಡುವಿನ ಸ್ಪರ್ಧೆಯ ಜವಾಬ್ದಾರಿಯುತ ನಿರ್ವಹಣೆ ಕುರಿತು ಚರ್ಚೆಯಾಗಲಿದೆ ಎಂದು ಶ್ವೇತಭವನ ತಿಳಿಸಿದೆ.

ಬೈಡನ್ ಅವರು ಅಮೆರಿಕದ ಅಧ್ಯಕ್ಷರಾಗಿಜನವರಿಯಲ್ಲಿ ಆಯ್ಕೆಯಾದ ಬಳಿಕ ಜಿನ್‌ಪಿಂಗ್ ಜೊತೆಗೆ ನಡೆಯಲಿರುವ ಮೊದಲ ದ್ವಿಪಕ್ಷೀಯ ಸಭೆ ಇದಾಗಿದೆ.

ಬೈಡನ್ ಮತ್ತು ಜಿನ್‌ಪಿಂಗ್ ಸೆಪ್ಟೆಂಬರ್‌ನಲ್ಲಿ ದೂರವಾಣಿ ಮೂಲಕ 90 ನಿಮಿಷ ಮಾತುಕತೆ ನಡೆಸಿದ್ದರು. ಅದಕ್ಕೂ ಮುನ್ನ ಫೆಬ್ರುವರಿಯಲ್ಲಿ ಸಂಭಾಷಣೆ ನಡೆಸಿದ್ದರು.

ADVERTISEMENT

‘ಅಧ್ಯಕ್ಷ ಜೋ ಬೈಡನ್ ಅವರು ನವೆಂಬರ್ 15, ಸೋಮವಾರ ಸಂಜೆ ವಾಷಿಂಗ್ಟನ್‌ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ವರ್ಚುವಲ್ ಆಗಿ ಭೇಟಿಯಾಗಲಿದ್ದಾರೆ‘ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಪ್ರಕಟಿಸಿದ್ದಾರೆ.

ಮುಂದುವರಿದು, ‘ಅಮೆರಿಕ ಮತ್ತು ಚೀನಾ ನಡುವಿನ ಸ್ಪರ್ಧೆಯ ಜವಾಬ್ದಾರಿಯುತ ನಿರ್ವಹಣೆ ವಿಧಾನ ಹಾಗೂ ಪರಸ್ಪರ ಆಸಕ್ತ ವ್ಯವಹಾರಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಉಭಯ ನಾಯಕರು ಚರ್ಚಿಸಲಿದ್ದಾರೆ‘ ಎಂದು ತಿಳಿಸಿದ್ದಾರೆ.

ಬೈಡನ್ ಅವರು ಅಮೆರಿಕದ ಉದ್ದೇಶ, ಆದ್ಯತೆ ಮತ್ತು ಚೀನಾ ಬಗೆಗಿನ ನಿಲುವನ್ನು ನೇರ ಮತ್ತು ಸ್ಪಷ್ಟವಾಗಿ ತಿಳಿಸಲಿದ್ದಾರೆ ಎಂದೂ ಹೇಳಿದ್ದಾರೆ.

ತೈವಾನ್ ಸಮೀಪದಲ್ಲಿ ಚೀನಾದ ಸೇನಾ ಕಾರ್ಯಾಚರಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಉಭಯ ದೇಶಗಳು ಮೂಗು ತೂರಿಸುತ್ತಾ ಬಂದಿವೆ.

ಬೈಡನ್ ಆಡಳಿತವು,ಷಿನ್‌ಜಿಯಾಂಗ್ ಮಾನವ ಹಕ್ಕುಗಳ ಉಲ್ಲಂಘನೆ ಸೇರಿದಂತೆತೈವಾನ್ ಮತ್ತು ಟಿಬೆಟ್‌ ಜೊತೆಗಿನ ವಿವಾದಗಳ ವಿಚಾರವಾಗಿ ಚೀನಾವನ್ನು ಹಣಿಯುವ ಪ್ರಯತ್ನ ಮಾಡುತ್ತಿದೆ.

ಚೀನಾ ಸೇನೆಯ ಆಕ್ರಮಣಕಾರಿ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ, ಇಂಡೋ–ಪೆಸಿಫಿಕ್ ಪ್ರದೇಶದಲ್ಲಿ ಸಾಮರ್ಥ್ಯ ವೃದ್ಧಿಸಿಕೊಳ್ಳುವತ್ತಲೂ ಬೈಡನ್ ಆಡಳಿತ ಹೆಜ್ಜೆ ಇಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.