ADVERTISEMENT

ಇಮ್ರಾನ್‌ ವಿರುದ್ಧ ಅವಿಶ್ವಾಸ ನಿರ್ಣಯದಲ್ಲಿ ಪಾತ್ರ: ಆರೋಪ ತಳ್ಳಿಹಾಕಿದ ಅಮೆರಿಕ

ಪಿಟಿಐ
Published 31 ಮಾರ್ಚ್ 2022, 12:36 IST
Last Updated 31 ಮಾರ್ಚ್ 2022, 12:36 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ಇಸ್ಲಾಮಾಬಾದ್/ವಾಷಿಂಗ್ಟನ್: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ಖಾನ್ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿರುವ ವಿಷಯದಲ್ಲಿ ತನ್ನ ಪಾತ್ರ ಇದೆ ಎಂಬ ಆರೋಪಗಳನ್ನು ಅಮೆರಿಕ ತಳ್ಳಿಹಾಕಿದೆ.

‘ದೇಶದಲ್ಲಿನ ಪ್ರಸಕ್ತ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿ ಪಾಕಿಸ್ತಾನ ವಿದೇಶಾಂಗ ಸಚಿವಾಲಯಕ್ಕೆ ತನ್ನ ಯಾವುದೇ ಇಲಾಖೆ ಅಥವಾ ಅಧಿಕಾರಿ ಪತ್ರ ಬರೆದಿಲ್ಲ ಎಂಬುದಾಗಿಯೂ ಅಮೆರಿಕ ಹೇಳಿದೆ’ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

‘ಪಿಟಿಐ ಪಕ್ಷದ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿರುವುದರಲ್ಲಿ ಅಮೆರಿಕದ ಪಾತ್ರ ಇಲ್ಲ. ಈ ಕುರಿತ ಆರೋಪಗಳಲ್ಲಿ ಸತ್ಯಾಂಶ ಇಲ್ಲ’ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಪಾಕಿಸ್ತಾನ ರಾಯಭಾರ ಕಚೇರಿ ಹಾಗೂ ಅಮೆರಿಕದ ಅಧಿಕಾರಿಗಳ ನಡುವೆ ಔಪಚಾರಿಕ ಚರ್ಚೆ ನಡೆದಿತ್ತು. ಈ ಚರ್ಚೆ ವೇಳೆಯಲ್ಲಿ ಪ್ರಸ್ತಾಪಗೊಂಡಿರುವ ವಿಷಯಗಳನ್ನೇ ಪತ್ರದಲ್ಲಿ ಉಲ್ಲೇಖಿಸಿರಬಹುದು’ ಎಂದು ಅಮೆರಿಕ ರಾಜತಾಂತ್ರಿಕ ಮೂಲಗಳು ಹೇಳಿವೆ ಎಂದೂ ಪತ್ರಿಕೆ ವರದಿ ಮಾಡಿದೆ.

‘ವಿವಿಧ ದೇಶಗಳ ರಾಜತಾಂತ್ರಿಕ ಅಧಿಕಾರಿಗಳ ನಡುವೆ ಈ ರೀತಿಯ ಔಪಚಾರಿಕ ಮಾತುಕತೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅಧಿಕಾರಿಗಳ ಮಧ್ಯೆ ನಡೆದ ಚರ್ಚೆ ಕುರಿತು ಪಾಕಿಸ್ತಾನ ಸರ್ಕಾರಕ್ಕೆ ಮಾಹಿತಿ ನೀಡುವ ಉದ್ದೇಶದಿಂದ ಇಂಥ ಪತ್ರ ಬರೆದಿರಬಹುದು. ಆದರೆ, ಇದನ್ನು ಸರ್ಕಾರ ಅಥವಾ ವ್ಯಕ್ತಿಯೊಬ್ಬರ ವಿರುದ್ಧದ ಪಿತೂರಿ ಎಂಬುದಾಗಿ ಭಾವಿಸಬಾರದು’ ಎಂದು ಮೂಲಗಳು ಹೇಳಿವೆ ಎಂದು ಡಾನ್‌ ವರದಿ ಮಾಡಿದೆ.

ಉಕ್ರೇನ್‌–ರಷ್ಯಾ ಸಂಘರ್ಷಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆದಿತ್ತು. ಯುದ್ಧ ನಿಲ್ಲಿಸುವಂತೆ ರಷ್ಯಾಕ್ಕೆ ಒತ್ತಾಯಿಸುವ ನಿರ್ಣಯದ ಮೇಲಿನ ಮತದಾನದಿಂದ ಪಾಕಿಸ್ತಾನ ದೂರ ಉಳಿದಿತ್ತು. ಹೀಗಾಗಿ, ಪಾಕಿಸ್ತಾನದ ನಿಲುವಿನ ಬಗ್ಗೆ ಅಮೆರಿಕ ಅಸಮಾಧಾನ ಹೊರಹಾಕಿತ್ತು ಎಂದು ಪತ್ರಿಕೆ ವರದಿಯಲ್ಲಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.