ನ್ಯೂಯಾರ್ಕ್: ಮಿನ್ನಿಯಾಪೊಲೀಸ್ ಕ್ಯಾಥೊಲಿಕ್ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿ ಇಬ್ಬರು ಮಕ್ಕಳ ಸಾವಿಗೆ ಕಾರಣವಾದ ಹಂತಕ ಬಳಸಿದ್ದ ಎನ್ನಲಾದ ಬಂದೂಕಿನ ಮೇಲೆ ನ್ಯೂಕ್ ಇಂಡಿಯಾ (Nuke India) ಎಂದಿರುವುದು ಈಗ ವ್ಯಾಪಕ ಚರ್ಚೆಗೆ ಒಳಗಾಗಿದೆ.
ಈ ಕುರಿತು ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಬಂದೂಕುದಾರಿಯನ್ನು ರಾಬಿನ್ ವೆಸ್ಟ್‌ಮನ್ (23) ಎಂದು ಗುರುತಿಸಲಾಗಿದ್ದು, ಈತ ಮಿನ್ನೆಸೊಟಾದವನು ಎಂದೆನ್ನಲಾಗಿದೆ. ಅನನ್ಸಿಯೇಶನ್ ಕ್ಯಾಥೊಲಿಕ್ ಶಾಲೆಗೆ ಬುಧವಾರ ನುಗ್ಗಿದ ಈತ ಮನಸೋಯಿಚ್ಛೆ ಗುಂಡು ಹಾರಿಸಿದ ಪರಿಣಾಮ 8 ಮತ್ತು 10 ವರ್ಷದ ಇಬ್ಬರು ಮಕ್ಕಳು ಮೃತಪಟ್ಟು 17 ಜನ ಗಾಯಗೊಂಡಿದ್ದಾರೆ. ಕೊನೆಯದಾಗಿ ಈತನೂ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ.
ಕೃತ್ಯಕ್ಕೆ ಈತ ಬಳಸಿದ ಬಂದೂಕುಗಳು ಎಂದೆನ್ನಲಾದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ. ಇದರಲ್ಲಿ ರೈಫಲ್ ಮತ್ತು ಬಂದೂಕನ್ನು ಬಳಸಲಾಗಿದೆ. ಅದರಲ್ಲಿ ಒಂದರ ಮೇಲೆ ‘ನ್ಯೂಕ್ ಇಂಡಿಯಾ’ ಎಂದು ಬರೆಯಲಾಗಿದೆ. ಮತ್ತೊಂದರಲ್ಲಿ ‘ಮಶಾಲ್ಲಾ (Mashallah)’ ಎಂದು ಬಿಳಿ ಬಣ್ಣದಲ್ಲಿ ಬರೆಯಲಾಗಿದೆ.
‘ಭಾರತೀಯ ಹಾಗೂ ಯಹೂದಿಯನ್ನು ವಿರೋಧಿಸುವ ಇಸ್ಲಾಮ್‌ನಿಂದ ಪ್ರಭಾವಿತನಾಗಿದ್ದ. ಮಿನ್ನೆಸೊಟಾದ ಜಿಲ್ಲೆಯಾದ ಇಲ್ಹಾನ್ ಒಮರ್‌ನಲ್ಲಿ ನೆಲೆಸಿದ್ದ ಈತ ಕ್ಯಾಥೊಲಿಕ್ ಚರ್ಚ್‌ನ ಶಾಲೆಯ ಮೇಲೆ ದಾಳಿ ನಡೆಸಿದ್ದು ಸಹಜವಾಗಿ ಆತ ಪ್ರಭಾವಿತನಾಗಿದ್ದ ಎಂಬುದನ್ನು ತೋರಿಸುತ್ತದೆ. ಇದು ಕೆಂಪು ಮತ್ತು ಹಸಿರು ಮೈತ್ರಿಗೆ ಮತ್ತೊಂದು ಉದಾಹರಣೆಯಾಗಿದೆ’ ಎಂದು ಪತ್ರಕರ್ತ ಲೂಮರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.