ADVERTISEMENT

ಅಮೆರಿಕ–ಭಾರತ ಬಾಂಧವ್ಯ ವೃದ್ಧಿಗೆ ಒತ್ತು

24ರಿಂದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಪ್ರವಾಸ

ಪಿಟಿಐ
Published 11 ಜೂನ್ 2019, 16:49 IST
Last Updated 11 ಜೂನ್ 2019, 16:49 IST
ಮೈಕ್‌ ಪಾಂಪಿಯೊ
ಮೈಕ್‌ ಪಾಂಪಿಯೊ   

ವಾಷಿಂಗ್ಟನ್‌: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಅವರು ಭಾರತಕ್ಕೆ ನೀಡಲಿರುವ ಭೇಟಿಯಿಂದ ಉಭಯ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳುವ ವಿಶ್ವಾಸ ಇದೆ ಎಂದು ವಿದೇಶಾಂಗ ವಿಭಾಗದ ವಕ್ತಾರ ಮೋರ್ಗನ್‌ ಓರ್ಟಾಗಸ್‌ ಹೇಳಿದ್ದಾರೆ.

’ಭಾರತದೊಂದಿಗಿನ ಸಂಬಂಧಕ್ಕೆ ಸಾಕಷ್ಟು ಮಹತ್ವವೂ ಇದೆ. ಏಷ್ಯಾ ರಾಷ್ಟ್ರಗಳೊಂದಿಗಿನ ಸಂಬಂಧ ಮುಕ್ತವಾಗಿರಬೇಕು ಎಂಬ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕಾರ್ಯತಂತ್ರದ ಭಾಗವಾಗಿ ಈ ದ್ವಿಪಕ್ಷೀಯ ಬಾಂಧವ್ಯಕ್ಕೆ ಒತ್ತು ನೀಡಲಾಗುತ್ತಿದೆ‘ ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಜೂನ್‌ 24ರಂದು ಪಾಂಪಿಯೊ ಪ್ರವಾಸ ಆರಂಭವಾಗಲಿದ್ದು, ಭಾರತಕ್ಕೆ ಮೊದಲು ಭೇಟಿ ನೀಡುವ ಅವರು, ಕೊನೆಯದಾಗಿ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡುವರು. ಒಂದು ವಾರ ಅವಧಿಯ ಪ್ರವಾಸದಲ್ಲಿ ಅವರು ಶ್ರೀಲಂಕಾ ಮತ್ತು ಜಪಾನ್‌ಗೂ ತೆರಳುವರು.

ADVERTISEMENT

ಒಸಾಕಾದಲ್ಲಿ ಇದೇ 28–29ರಂದು ಜಿ–20 ಸಮ್ಮೇಳನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತದ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವರು. ಇದಕ್ಕೆ ಮುನ್ನ ಪಾಂಪಿಯೋ ದೆಹಲಿಗೆ ಭೇಟಿ ನೀಡಲಿದ್ದಾರೆ.

’ನರೇಂದ್ರ ಮೋದಿ ಅವರು ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಜಯ ದಾಖಲಿಸಿರುವುದು ಅವರಿಗೆ ತಮ್ಮ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮತ್ತೊಂದು ಅವಕಾಶ ನೀಡಿದೆ‘ ಎಂದೂ ಓರ್ಟಾಗಸ್‌ ಅಭಿಪ್ರಾಯಪಟ್ಟಿದ್ದಾರೆ.

’ಭಾರತಕ್ಕೆ ಭೇಟಿ ನೀಡುವುದಕ್ಕೆ ಮುನ್ನ ನಾನು ಅಮೆರಿಕದಲ್ಲಿರುವ ಭಾರತ ಮೂಲದ ಉದ್ಯಮಿಗಳು, ವರ್ತಕರೊಂದಿಗೆ ಸಂವಾದ ನಡೆಸುವೆ‘ ಎಂದು ಪಾಂಪಿಯೊ ಹೇಳಿದ್ದಾರೆ.

ಚೀನಾ ನಡೆಗೆ ಪ್ರತಿರೋಧ...

ವ್ಯಾಪಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನಾ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿರುವ ನಡುವೆಯೇ ಮೈಕ್‌ ಪಾಂಪಿಯೊ ಭಾರತಕ್ಕೆ ಭೇಟಿ ನೀಡುತ್ತಿರುವುದಕ್ಕೆ ಮಹತ್ವ ಇದೆ. ಅದರಲ್ಲೂ, ಹಿಂದೂ ಮಹಾಸಾಗರ, ಪಶ್ಚಿಮ ಮತ್ತು ಕೇಂದ್ರೀಯ ಪೆಸಿಫಿಕ್‌ ಸಾಗರ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ತನ್ನ ಮಿಲಿಟರಿ ಪ್ರಾಬಲ್ಯ ವಿಸ್ತರಿಸಲು ಹವಣಿಸುತ್ತಿದೆ.

ಚೀನಾದ ಈ ನಡೆಗೆ ವಿರೋಧವೂ ವ್ಯಕ್ತವಾಗುತ್ತಿದ್ದು, ಭಾರತ, ಅಮೆರಿಕ ಸೇರಿದಂತೆ ಹಲವಾರು ರಾಷ್ಟ್ರಗಳು ತಮ್ಮ ನಡುವೆ ಮುಕ್ತ ಕೊಡು–ಕೊಳ್ಳುವಿಕೆ ಅಗತ್ಯ ಎಂದು ಪ್ರತಿಪಾದಿಸುತ್ತಿವೆ. ಚೀನಾಕ್ಕೆ ಸೆಡ್ಡು ಹೊಡೆಯಲು ಅಗತ್ಯವಿರುವ ಕಾರ್ಯತಂತ್ರವನ್ನೂ ಈ ದೇಶಗಳು ರೂಪಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.