
ಮೀನು ದೊಗ್ರಾ ಫೇಸ್‌ಬುಕ್ ಖಾತೆಯ ಚಿತ್ರ
ವಾಷಿಂಗ್ಟನ್: ಶಂಕಿತ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ನಾಲ್ವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮೃತಪಟ್ಟ ಎಲ್ಲರ ರಾಷ್ಟ್ರೀಯತೆ ಬಹಿರಂಗಗೊಂಡಿಲ್ಲ. ಈ ಪೈಕಿ ಒಬ್ಬರನ್ನು ಭಾರತ ಮೂಲದ ವ್ಯಕ್ತಿ ಎಂದು ಅಟ್ಲಾಂಟಾದ ಭಾರತೀಯ ಕಾನ್ಸುಲೆಟ್ ಜನರಲ್ ಖಚಿಪಡಿಸಿದೆ. ಅಟ್ಲಾಂಟಾದ ಗ್ವಿನ್ನಟ್ ಕೌಂಟಿಯಲ್ಲಿ ಈ ದುರಂತ ನಡೆದಿದೆ.
ಗುಂಡಿನ ದಾಳಿ ನಡೆಸಿದ ಶಂಕಿತನನ್ನು ವಿಜಯ್ ಕುಮಾರ್(51) ಎಂದು ಗುರುತಿಸಲಾಗಿದೆ. ಮೃತರ ಪೈಕಿ ಅವರ ಪತ್ನಿ ಮೀನು ದೊಗ್ರಾ(43) ಸಹ ಸೇರಿದ್ದಾರೆ. ಗೌರವ್ ಕುಮಾರ್(33), ನಿಧಿ ಚಂದರ್(37) ಮತ್ತು ಹರೀಶ್ ಚಂದರ್(38) ಮೃತಪಟ್ಟ ಇತರರು.
ಹೆಸರುಗಳನ್ನು ಗಮನಿಸಿದರೆ ಮೃತರೆಲ್ಲರೂ ಭಾರತೀಯರಿರಬಹುದು ಎಂದೆನಿಸುತ್ತದೆ. ಆದರೆ, ಅಧಿಕೃತವಾಗಿ ಒಬ್ಬ ವ್ಯಕ್ತಿಯ ರಾಷ್ಟ್ರೀಯತೆಯನ್ನು ಮಾತ್ರ ಖಚಿತಪಡಿಸಲಾಗಿದೆ ಎಂದು ವರದಿ ತಿಳಿಸಿದೆ.
‘ಶಂಕಿತ ಕೌಟುಂಬಿಕ ಕಲಹ ಸಂಬಂಧಿತ ಈ ದುರಂತ ಘಟನೆ ಬಗ್ಗೆ ಅತೀವ ದುಃಖ ವ್ಯಕ್ತಪಡಿಸುತ್ತೇವೆ. ಮೃತರಲ್ಲಿ ಭಾರತೀಯ ಪ್ರಜೆ ಸಹ ಇದ್ದಾರೆ. ಗುಂಡಿನ ದಾಳಿ ನಡೆಸಿದವನನ್ನು ಬಂಧಿಸಲಾಗಿದೆ. ಮೃತರ ಕುಟುಂಬ ಸದಸ್ಯರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುವುದು’ ಎಂದು ಭಾರತೀಯ ಕಾನ್ಸುಲೆಟ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಪತಿ, ಪತ್ನಿ ನಡುವೆ ವಾಗ್ವಾದ
ಗ್ವಿನ್ನೆಟ್ ಕೌಂಟಿ ಪೊಲೀಸರ ಪ್ರಕಾರ, ವಿಜಯ್ ಕುಮಾರ್ ಮತ್ತು ಅವರ ಪತ್ನಿ ಮೀನು ದೊಗ್ರಾ ತಮ್ಮ 12 ವರ್ಷದ ಮಗನ ಜೊತೆ ಬ್ರೂಕ್ ಇವಿ ಕೋರ್ಟ್‌ನಲ್ಲಿರುವ ತಮ್ಮ ಸಂಬಂಧಿಕರಾದ ಗೌರವ್, ನಿಧಿ ಮತ್ತು ಹರೀಶ್ ಅವರ ಮನೆಗೆ ಬಂದಿದ್ದರು. ಅಲ್ಲಿ 7 ಮತ್ತು 8 ಬರ್ಷದ ಇಬ್ಬರು ಮಕ್ಕಳೂ ಇದ್ದರು. ಸಂಬಂಧಿಕರ ಮನೆಗೆ ತೆರಳುವ ಮುನ್ನ ದಂಪತಿ ತಮ್ಮ ಅಟ್ಲಾಂಟಾದ ನಿವಾಸದಲ್ಲಿ ವಾಗ್ವಾದ ನಡೆಸಿದ್ದರು.
ಮೃತರ ಪೈಕಿ ಯಾರು ಭಾರತೀಯ ಎಂದು ಕಾನ್ಸುಲೇಟ್ ಖಚಿತವಾಗಿ ಹೇಳಿಲ್ಲ.
911ಕ್ಕೆ ಕರೆ ಮಾಡಿದ್ದ ಬಾಲಕ
ಅಪರಾಧ ಕೃತ್ಯದ ಕುರಿತು ಕರೆ ಬಂದ ಬಳಿಕ ಪೊಲೀಸರು ಮನೆಗೆ ಧಾವಿಸಿದಾಗ 7, 9 ಮತ್ತು 12 ವರ್ಷದ ಮೂವರು ಮಕ್ಕಳು ಮನೆಯಲ್ಲಿ ಅಡಗಿ ಕುಳಿತಿದ್ದರು. ನಾಲ್ವರ ಮೃತದೇಹಗಳು ಪತ್ತೆಯಾಗಿದ್ದವು. ಅಲ್ಲಿದ್ದ 12 ವರ್ಷದ ಬಾಲಕ ಪೊಲೀಸರಿಗೆ ಕರೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕೌಟುಂಬಿಕ ಸಂಬಂಧಿತ ಗಲಭೆ ಇದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಯಾವುದೇ ಹೆಸರನ್ನು ಉಲ್ಲೇಖಿಸದ ಪೊಲೀಸರು, ಶಂಕಿತನು ಅಪರಾಧದ ಸ್ಥಳದಿಂದ ಸಮೀಪದಲ್ಲೇ ಇದ್ದನು. ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.