ADVERTISEMENT

ದಲೈ ಲಾಮಗೆ ಆಶ್ರಯ: ಭಾರತಕ್ಕೆ ಧನ್ಯವಾದ ತಿಳಿಸಿದ ಅಮೆರಿಕ

ಪಿಟಿಐ
Published 7 ಜುಲೈ 2020, 9:28 IST
Last Updated 7 ಜುಲೈ 2020, 9:28 IST
ದಲೈ ಲಾಮ
ದಲೈ ಲಾಮ   

ವಾಷಿಂಗ್ಟನ್‌: ಸೋಮವಾರ 85ನೇ ವರ್ಷಕ್ಕೆ ಕಾಲಿರಿಸಿದ ಟಿಬೆಟ್‌ನ ಅಧ್ಯಾತ್ಮ ಗುರು ದಲೈ ಲಾಮ ಅವರನ್ನು ಅಭಿನಂದಿಸಿರುವ ಅಮೆರಿಕವು, 1959ರಿಂದ ಅವರಿಗೆ ಆಶ್ರಯ ನೀಡಿದ್ದಕ್ಕಾಗಿ ಭಾರತಕ್ಕೆ ಧನ್ಯವಾದಗಳನ್ನು ತಿಳಿಸಿದೆ.

‘ಶಾಂತಿ ಮತ್ತು ಕರುಣೆಯ ಮೂಲಕ ಜಗತ್ತಿಗೆ ಸ್ಫೂರ್ತಿ ನೀಡಿರುವ, ಟಿಬೆಟ್‌ನ ಜನರಿಗೆ ಹೋರಾಟದ ಸಂಕೇತವಾಗಿರುವ ಅಧ್ಯಾತ್ಮ ಗುರು ದಲೈ ಲಾಮ ಅವರಿಗೆ 85ನೇ ಜನ್ಮದಿನದ ಶುಭಾಶಯಗಳು. ಸ್ವಾತಂತ್ರ್ಯ ಬಯಸುವ ಟಿಬೆಟನ್ನರು ಹಾಗೂ ದಲೈ ಲಾಮ ಅವರಿಗೆ 1959ರಿಂದ ಆಶ್ರಯ ನೀಡುತ್ತಿರುವ ಭಾರತಕ್ಕೆ ನಾವು ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇವೆ’ ಎಂದು ಅಮೆರಿಕದ ಗೃಹ ಸಚಿವಾಲಯದ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ವಿಭಾಗವು ಸೋಮವಾರ ಟ್ವೀಟ್‌ ಮಾಡಿದೆ.

ಸ್ವಾತಂತ್ರ್ಯಕ್ಕಾಗಿ ಟಿಬೆಟ್‌ನಲ್ಲಿ ಸ್ಥಳೀಯರು ಆರಂಭಿಸಿದ್ದ ಹೋರಾಟವನ್ನು ದಮನಮಾಡಲು ಚೀನಾ ಅನುಸರಿಸಿದ್ದ ಆಕ್ರಮಣಕಾರಿ ಕ್ರಮದಿಂದಾಗಿ 1959ರಲ್ಲಿ ದಲೈ ಲಾಮ ಟಿಬೆಟ್‌ ಬಿಟ್ಟು ಬರಬೇಕಾಯಿತು.

ADVERTISEMENT

‘ಟಿಬೆಟ್‌ನ ಜನರ ಮೇಲೆ ಚೀನಾದ ಆಕ್ರಮಣಶೀಲತೆಯನ್ನು ಅಮೆರಿಕ ಈಗಲೂ ಖಂಡಿಸುತ್ತದೆ. ಅಷ್ಟೇ ಅಲ್ಲ, ಉಯಿಗರ್‌ ಸಮುದಾಯದ ಮೇಲಿನ ದಾಳಿ, ಹಾಂಗ್‌ಕಾಂಗ್‌ ಜನರ ಹಕ್ಕನ್ನು ಕಸಿದಿರುವುದು ಮತ್ತು ಚೀನಾದಾದ್ಯಂತ ಜನರ ಹಕ್ಕು ಹಾಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಅಲ್ಲಿನ ಸರ್ಕಾರದ ನೀತಿಯನ್ನು ಸಹ ನಾವು ವಿರೋಧಿಸುತ್ತೇವೆ’ ಎಂದು ಅಮೆರಿಕದ ಜನಪ್ರತಿನಿಧಿ ಸಭೆಯ ಸ್ಪೀಕರ್‌ ನ್ಯಾನ್ಸಿ ಪೆಲೊಸಿ ಹೇಳಿದ್ದಾರೆ.

ಚೀನಾದ ನಿಲುವುಗಳನ್ನು ಖಂಡಿಸಿ ಮತ್ತು ದಲೈ ಲಾಮ ಅವರನ್ನು ಅಭಿನಂದಿಸಿ ಇನ್ನೂ ಹಲವು ನಾಯಕರು ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.