
ಅಮೆರಿಕ ವೀಸಾ
ವಾಷಿಂಗ್ಟನ್: ಕಳೆದ ವರ್ಷ (2025) ಅಮೆರಿಕ ಸರ್ಕಾರವು 1 ಲಕ್ಷಕ್ಕೂ ಹೆಚ್ಚು ವೀಸಾಗಳನ್ನು ರದ್ದುಪಡಿಸಿರುವುದಾಗಿ ಫಾಕ್ಸ್ ನ್ಯೂಸ್ ವರದಿ ಮಾಡಿದೆ.
ಅಮೆರಿಕದ ಕಾನೂನು ಉಲ್ಲಂಘಿಸಿದವರು ಹಾಗೂ ಅಪರಾಧ ದಾಖಲೆಗಳನ್ನು ಹೊಂದಿರುವ 1 ಲಕ್ಷಕ್ಕೂ ಹೆಚ್ಚು ವಿದೇಶಿಗರ ವೀಸಾಗಳನ್ನು ರದ್ದುಪಡಿಸಲಾಗಿದೆ.
ಅಮೆರಿಕ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಈ ವೀಸಾಗಳ ಪೈಕಿ 8,000 ವಿದ್ಯಾರ್ಥಿ ವೀಸಾಗಳು ಹಾಗೂ 2,500 ವಿಶೇಷ ಉದ್ಯೋಗ ವೀಸಾಗಳು ಸೇರಿವೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ತಿಳಿಸಿದೆ.
ದೇಶದ ಭದ್ರತೆ ಬಲಪಡಿಸುವುದು ಹಾಗೂ ವಲಸೆ ನಿಯಂತ್ರಣ ಭಾಗವಾಗಿ ಈ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ವೀಸಾ ಪಡೆದು ದೇಶ ಪ್ರವೇಶಿಸಿದ ನಂತರವೂ ಅವರ ಮೇಲೆ ನಿಗಾವಹಿಸಲಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಅಮೆರಿಕಕ್ಕೆ ಪ್ರಯಾಣಿಸುವ, ಅಧ್ಯಯನ ಮಾಡುವ ಮತ್ತು ಕೆಲಸ ಮಾಡುವ ವಿದೇಶಿಗರ ಪೈಕಿ ಭಾರತೀಯರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಕಟ್ಟುನಿಟ್ಟಿನ ಕ್ರಮಗಳಿಂದ ನೇರವಾಗಿ ಭಾರತೀಯರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಲ್ಲಿರುವ ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತೀಯರ ಸಂಖ್ಯೆ ಅಧಿಕವಾಗಿರುವ ಈ ಸಂದರ್ಭದಲ್ಲೇ ಈ ವೀಸಾ ರದ್ದತಿ ನಡೆದಿದೆ.
ಇತ್ತೀಚಿನ ವರ್ಷಗಳಲ್ಲಿ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಚೀನಾ ವಿದ್ಯಾರ್ಥಿಗಳಿಗಿಂತ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ವೀಸಾ ರದ್ಧತಿ ಪರಿಣಾಮ ಭಾರತೀಯ ವಿದ್ಯಾರ್ಥಿಗಳಿಗೆ ನೀಡಲಾಗುವ ವೀಸಾಗಳ ಸಂಖ್ಯೆ ಗಣನೀಯವಾಗಿ ಕುಸಿತಗೊಂಡಿದೆ. ಇಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ವೃತ್ತಿಪರರು ವೀಸಾ ನೀತಿ ಬದಲಾವಣೆಗಳ ಪರಿಣಾಮ ಎದುರಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.