ADVERTISEMENT

ವಿಶ್ವದೆಲ್ಲೆಡೆಯಿಂದ ಪ್ರತಿಭಾವಂತರ ಕರೆತರಲು ಎಚ್‌–1ಬಿ ವೀಸಾ ಅಗತ್ಯ: ಟ್ರಂಪ್

ಪಿಟಿಐ
Published 12 ನವೆಂಬರ್ 2025, 13:55 IST
Last Updated 12 ನವೆಂಬರ್ 2025, 13:55 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಎಚ್‌–1ಬಿ ವೀಸಾ ಕಾರ್ಯಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. 

‘ಕೆಲ ಕ್ಷೇತ್ರಗಳಿಗೆ ಸಂಬಂಧಿಸಿ ಅಮೆರಿಕದಲ್ಲಿ ಪ್ರತಿಭಾವಂತರು ಇಲ್ಲ. ಈ ಕೊರತೆ ನೀಗಿಸಲು ವಿಶ್ವದ ವಿವಿಧ ಭಾಗಗಳಿಂದ ಪ್ರತಿಭಾವಂತರನ್ನು ಅಮೆರಿಕಕ್ಕೆ ಕರೆತರುವುದು ಅಗತ್ಯ. ಹೀಗಾಗಿ ಎಚ್‌–1ಬಿ ವೀಸಾ ಅಗತ್ಯ’ ಎಂದು ಹೇಳಿದ್ದಾರೆ.

ಫಾಕ್ಸ್‌ ನ್ಯೂಸ್‌ನ ಲಾರಾ ಇನ್‌ಗ್ರಹಾಮ್ ಅವರಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದ್ದಾರೆ.

ADVERTISEMENT

‘ಎಚ್‌–1ಬಿ ವೀಸಾ ಯೋಜನೆ ಟ್ರಂಪ್‌ ಆಡಳಿತದ ಆದ್ಯತೆ ಆಗಿಲ್ಲವೇ? ಒಂದು ವೇಳೆ, ಅಮೆರಿಕನ್ನರಿಗೆ ನೀಡುವ ವೇತನವನ್ನು ಹೆಚ್ಚಳ ಮಾಡಿದಲ್ಲಿ ಇತರ ದೇಶಗಳಿಂದ ಉದ್ಯೋಗ ಅರಸಿ ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆಯಾಗುವುದಿಲ್ಲವೇ’ ಎಂಬ ಲಾರಾ ಅವರ ಪ್ರಶ್ನೆಗೆ ಟ್ರಂಪ್‌ ಈ ಪ್ರತಿಕ್ರಿಯೆ ನೀಡಿದ್ದಾರೆ.

‘ನಮ್ಮಲ್ಲಿಯೇ ಸಾಕಷ್ಟು ಪ್ರತಿಭೆಗಳಿವೆಯಲ್ಲ?’ ಎಂದೂ ಲಾರಾ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ‘ಇಲ್ಲ. ಅಮೆರಿಕವು ಕೆಲ ಕ್ಷೇತ್ರಗಳಿಗೆ ಸಂಬಂಧಿಸಿ ಪ್ರತಿಭೆಗಳನ್ನು ಹೊಂದಿಲ್ಲ. ಅಂತಹ ಪ್ರತಿಭಾವಂತರನ್ನು ಇತರ ದೇಶಗಳಿಂದ ಕರೆತರಬೇಕು. ಇಲ್ಲಿನ ಜನರು ಇನ್ನಷ್ಟು ಕಲಿಯಬೇಕಿದೆ’ ಎಂದು ಹೇಳಿದ್ದಾರೆ.

ಎಚ್‌–1ಬಿ ವೀಸಾ ದುರ್ಬಳಕೆ ತಡೆಯುವ ಉದ್ದೇಶದಿಂದ ಕಳೆದ ವಾರ ಟ್ರಂಪ್‌ ಆಡಳಿತವು ತನಿಖೆ ಆರಂಭಿಸಿತ್ತು. ‘ಅಮೆರಿಕದಲ್ಲಿನ ಉದ್ಯೋಗಗಳ ಸಂರಕ್ಷಣೆ ಮಾಡುವ ಅಗತ್ಯ ಇದ್ದು, ಇದಕ್ಕಾಗಿ ಎಚ್‌–1ಬಿ ವೀಸಾ ದುರ್ಬಳಕೆಗೆ ಕಡಿವಾಣ ಹಾಕಬೇಕಿದೆ. ಹೀಗಾಗಿ 175 ಪ್ರಕರಣಗಳ ಕುರಿತು ತನಿಖೆ ಕೈಗೊಂಡಿದ್ದೇವೆ’ ಎಂದು ಕಾರ್ಮಿಕ ಇಲಾಖೆ ‘ಎಕ್ಸ್’ನಲ್ಲಿ ಪೋಸ್ಟ್‌ ಮಾಡಿತ್ತು.

ಎಚ್‌–1ಬಿ ವೀಸಾ ಅರ್ಜಿ ಶುಲ್ಕ ಹೆಚ್ಚಳ ಮಾಡುವ ಆದೇಶಕ್ಕೆ ಟ್ರಂಪ್‌ ಅವರು ಸೆಪ್ಟೆಂಬರ್‌ನಲ್ಲಿ ಸಹಿ ಹಾಕಿದ್ದರು. ಈ ನೂತನ ಆದೇಶದ ಪ್ರಕಾರ, ಈ ವೀಸಾಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸುವವರು 1 ಲಕ್ಷ ಡಾಲರ್‌(ಅಂದಾಜು ₹88 ಲಕ್ಷ) ಶುಲ್ಕ ನೀಡಬೇಕಾಗುತ್ತದೆ.

ಟ್ರಂಪ್‌ ಅವರ ಈ ಕ್ರಮದಿಂದ, ಉದ್ಯೋಗ ಅರಸಿ ಅಮೆರಿಕಕ್ಕೆ ತೆರಳುವ ಭಾರತೀಯರಿಗೆ ಅದರಲ್ಲೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದವರಿಗೆ ಭಾರಿ ಸಮಸ್ಯೆಯಾಗಿದೆ. ವಿಶೇಷ ಕೌಶಲ ಅಗತ್ಯವಿರುವ ವಿದೇಶಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಅಮೆರಿಕದ ಕಂಪನಿಗಳಿಗೂ ಈ ಆದೇಶದಿಂದ ಹೊರೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.