ADVERTISEMENT

ಇರಾನ್ ಪ್ರೇರಿತ ದಾಳಿ ಮುಂದುವರಿದರೆ ನಮ್ಮ ಪ್ರತೀಕಾರ ಕೆಟ್ಟದ್ದಾಗಿರಲಿದೆ: ಅಮೆರಿಕ

ಏಜೆನ್ಸೀಸ್
Published 5 ಫೆಬ್ರುವರಿ 2024, 3:32 IST
Last Updated 5 ಫೆಬ್ರುವರಿ 2024, 3:32 IST
ಜೇಕ್ ಸುಲಿವನ್
ಜೇಕ್ ಸುಲಿವನ್   

ಜೆರುಸೆಲೆಂ: ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರಿಸಿದರೆ ನಮ್ಮ ಸೇನಾ ಕಾರ್ಯಾಚಾರಣೆಯನ್ನು ಇನ್ನಷ್ಟು ಹೆಚ್ಚಿಸಬೇಕಾಗುತ್ತದೆ ಎಂದು ಇರಾನ್ ಬೆಂಬಲಿತ ಬಂಡುಕೋರರ ಪಡೆಗಳಿಗೆ ಅಮೆರಿಕ ಎಚ್ಚರಿಸಿದೆ.

ಇರಾನ್ ಬೆಂಬಲಿತ ಬಂಡುಕೋರರನ್ನು ಗುರಿಯಾಗಿಸಿಕೊಂಡು ಕಳೆದ ಒಂದು ವಾರದಿಂದ ಇರಾಕ್ ಮತ್ತು ಸಿರಿಯಾದಲ್ಲಿ ನಡೆಸಿದ ವೈಮಾನಿಕ ದಾಳಿ ಕುರಿತಂತೆ ಮಾಧ್ಯಮದೊಂದಿಗೆ ಮಾತನಾಡಿದ ಜೋ ಬೈಡೆನ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲಿವನ್, ‘ಯಾವುದನ್ನು ಹೇಗೆ ಎದುರಿಸಬೇಕು ಎಂಬುವುದು ನಮಗೆ ತಿಳಿದಿದೆ’ ಎಂದರು.

'ನೇರವಾಗಿ ಪ್ರತೀಕಾರ ತೀರಿಸಿಕೊಳ್ಳಲು ಬಂದರೆ ನಮ್ಮಿಂದಲೂ ಅಷ್ಟೇ ನೇರವಾದ ಪ್ರತಿಕ್ರಿಯೆಯನ್ನು ಬಂಡುಕೋರರು ನಿರೀಕ್ಷಿಸಬೇಕು’ ಎಂದು ಪರೋಕ್ಷವಾಗಿ ಇರಾನ್ ವಿರುದ್ಧ ಕುಟುಕಿದ್ದಾರೆ.

ADVERTISEMENT

‘ಮುಂದಿನ ದಿನಗಳಲ್ಲಿ ಇರಾನ್ ಬೆಂಬಲಿತ ಬಂಡುಕೋರರಿಂದ ಅಥವಾ ಹೌತಿ ಬಂಡುಕೋರರಿಂದ ಇರಾಕ್ ಮತ್ತು ಸಿರಿಯಾದಲ್ಲಿ ಇನ್ನಷ್ಟು ದಾಳಿಗಳು ನಡೆಯಬಹುದು. ಈ ವಿಚಾರವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಆದರೆ ಮುಂದೆ ನಡೆಯುವ ಎಲ್ಲ ದಾಳಿಗಳಿಗೆ ಅವರೇ ಜವಾಬ್ದಾರರಾಗಿರುತ್ತಾರೆ’ ಎಂದು ಪ್ರತೀಕಾರದ ದಾಳಿ ಕುರಿತು ಸುಲಿವನ್‌ ಸುಳಿವು ನೀಡಿದರು.

ಕಳೆದ ಭಾನುವಾರ ಜೋರ್ಡಾನ್‌ನಲ್ಲಿ ಅಮೆರಿಕದ ಸೇನಾನೆಲೆ ಮೇಲೆ ಇರಾನ್‌ ಬೆಂಬಲಿತ ಬಂಡುಕೋರರು(ಇರಾನ್ ರೆವಲ್ಯೂಷನರಿ ಗಾರ್ಡ್ಸ್) ಡ್ರೋನ್‌ ದಾಳಿ ನಡೆಸಿ, ಮೂವರು ಸೈನಿಕರನ್ನು ಕೊಂದಿದ್ದರು. ಇದಕ್ಕೆ ಪ್ರತೀಕಾರವಾಗಿ ಇರಾಕ್ ಮತ್ತು ಸಿರಿಯಾದಲ್ಲಿರುವ ಬಂಡುಕೋರರ ನೆಲೆಗಳ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಕನಿಷ್ಠ 40 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.